Publish Date: Sat, 18 May 2024 (09:00 IST)
Updated Date: Sat, 18 May 2024 (09:11 IST)
Photo Courtesy: Instagram
ಹೈದರಾಬಾದ್: ರಸ್ತೆ ಅಪಘಾತದಲ್ಲಿ ಮೊನ್ನೆಯಷ್ಟೇ ನಿಧನರಾಗಿದ್ದ ಕಿರುತೆರೆ ನಟಿ ಪವಿತ್ರಾ ಜಯರಾಂ ಸಾವಿನ ಶಾಕ್ ಮಾಸುವ ಮುನ್ನವೇ ಮತ್ತೊಂದು ಶಾಕಿಂಗ್ ಸುದ್ದಿ ಕೇಳಿಬಂದಿದೆ. ಪವಿತ್ರಾ ಗೆಳೆಯ ಚಂದ್ರು ನೇಣಿಗೆ ಶರಣಾಗಿದ್ದಾರೆ.
ಮೊನ್ನೆಯಷ್ಟೇ ಪವಿತ್ರಾ ಸಂಗಡಿಗರೊಂದಿಗೆ ಹೈದರಾಬಾದ್ ಗೆ ತೆರಳುತ್ತಿದ್ದಾಗ ಕಾರು ಅಪಘಾತಕ್ಕೀಡಾಗಿತ್ತು. ಈ ವೇಳೆ ಚಂದ್ರು ಕೂಡಾ ಕಾರಿನಲ್ಲಿದ್ದರು. ಚಂದ್ರುಗೆ ಗಾಯಗೊಂಡಿದ್ದು ನೋಡಿ ಗಾಬರಿಗೊಂಡಿದ್ದ ಪವಿತ್ರಾ ಶಾಕ್ ನಲ್ಲೇ ಕೊನೆಯುಸಿರೆಳೆದಿದ್ದರು. ತಮ್ಮ ಮಡಿಲಲ್ಲಿ ಕೊನೆಯುಸಿರೆಳೆದಿದ್ದ ಪವಿತ್ರಾಳನ್ನು ನೋಡಿ ಚಂದ್ರು ಕೂಡಾ ತೀವ್ರ ಆಘಾತಗೊಂಡಿದ್ದರು. ಮಾಧ್ಯಮಗಳ ಮುಂದೆಯೂ ಅಳುತ್ತಲೇ ಘಟನೆ ಬಗ್ಗೆ ವಿವರಿಸಿದ್ದರು. ಪವಿತ್ರಾ ಅಂತ್ಯಕ್ರಿಯೆಗಾಗಿ ಮಂಡ್ಯಕ್ಕೂ ಬಂದಿದ್ದರು.
ಆದರೆ ಇದೀಗ ಆಪ್ತ ಗೆಳತಿಯ ಸಾವಿನ ದುಃಖ ತಡೆಯಲಾಗದೇ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಹೈದರಾಬಾದ್ ನ ಮಣಿಕೊಂಡದಲ್ಲಿರುವ ತಮ್ಮ ಮನೆಯಲ್ಲಿಯೇ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಚಂದ್ರು ಕೂಡಾ ಕಿರುತೆರೆ ನಟ. ತ್ರಿನಯಿನಿ ಧಾರವಾಹಿಯಲ್ಲಿ ಪವಿತ್ರಾ ಜೊತೆಗೆ ಅಭಿನಯಿಸುತ್ತಿದ್ದರು. ಇಬ್ಬರೂ ಆಪ್ತರಾಗಿದ್ದರು. ಚಂದ್ರುಗೆ ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.
ಇದೀಗ ಪವಿತ್ರಾ ಸಾವಿನ ದುಃಖ ಮಾಸುವ ಮುನ್ನವೇ ಚಂದ್ರು ಕೂಡಾ ದುರಂತ ಅಂತ್ಯಕ್ಕೆ ಶರಣಾಗಿದ್ದು ವಿಪರ್ಯಾಸ. ಚಂದ್ರು ಸಾವು ಮತ್ತೆ ಕಿರುತೆರೆ ಲೋಕಕ್ಕೆ ಶಾಕ್ ತಂದಿದೆ. ತಮ್ಮ ಇನ್ ಸ್ಟಾ ಪುಟದಲ್ಲಿ ಎರಡು ದಿನ ಮೊದಲು ಇನ್ನು ಎರಡು ದಿನ ಕಾದಿರು ಗೆಳತಿ ಎಂದು ಬರೆದುಕೊಂಡಿದ್ದರು. ಹೀಗಾಗಿ ಅವರು ಆತ್ಮಹತ್ಯೆ ಬಗ್ಗೆ ಯೋಚಿಸಿದ್ದರು ಎನ್ನಲಾಗಿದೆ.