Publish Date: Sun, 29 Sep 2024 (16:00 IST)
Updated Date: Sun, 29 Sep 2024 (16:05 IST)
ಕೊಚ್ಚಿ: ಮಲಯಾಳಂ ನಟ ಹಾಗೂ ನಿರ್ದೇಶಕ ಬಾಲಚಂದ್ರ ಮೆನನ್ ಕುರಿತು ಆಕ್ಷೇಪಾರ್ಹ ಹೇಳಿಕೆಗಳನ್ನು ಪ್ರಸಾರ ಮಾಡಿದ ಆರೋಪದಡಿ ಯೂಟ್ಯೂಬರ್‌ಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ ಬಾಲಚಂದ್ರ ಮೆನನ್ ಅವರು ಕೊಚ್ಚಿಯ ನಗರ ಪೊಲೀಸ್ ಆಯುಕ್ತರಿಗೆ ನೀಡಿದ ದೂರಿನ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೆನನ್ ಅವರು ಕೊಚ್ಚಿಯ ನಗರ ಪೊಲೀಸ್ ಆಯುಕ್ತರಿಗೆ ನೀಡಿದ ದೂರು ಆಧರಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಕೆಲವು ಯೂಟ್ಯೂಬ್ ಚಾನೆಲ್‌ಗಳಲ್ಲಿ 2024ರ ಏಪ್ರಿಲ್ 18ರಂದು ನಟಿಯೊಬ್ಬರು ನೀಡಿದ ಸಂದರ್ಶನದಲ್ಲಿ ಮೆನನ್ ವಿರುದ್ಧ ಕೆಲವು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದರು. ಆ ಸಂದರ್ಶನದ ವಿಡಿಯೊವನ್ನು ಸೆಪ್ಟೆಂಬರ್ 27ರಂದು ಪುನಃ ಪ್ರಸಾರ ಮಾಡುವ ಮೂಲಕ ಉದ್ದೇಶಪೂರ್ವಕವಾಗಿಯೇ ನನ್ನನ್ನು ಬೆದರಿಸಲು ಮತ್ತು ಮಾನಹಾನಿಗೊಳಿಸಲು ಪ್ರಯತ್ನಿಸಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ದೂರಿದ್ದಾರೆ.
ಈ ಸಂಬಂಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.