ಬೆಂಗಳೂರು: ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆಗೆ ಗುಡ್ ಬೈ ಹೇಳಿದ್ದರು. ಆದರೆ ಅವರನ್ನು ಮತ್ತೆ ಬಲವಂತ ಮಾಡಿದ್ದೇ ಪತ್ನಿ ಪ್ರಿಯಾ ಸುದೀಪ್.
ಕಿಚ್ಚ ಸುದೀಪ್ ಮತ್ತು ಪ್ರಿಯಾ 25 ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಇದೇ ಕಾರಣಕ್ಕೆ ನಿನ್ನೆ ಬಿಗ್ ಬಾಸ್ ಶೋಗೆ ವೇದಿಕೆ ಮೇಲಿದ್ದ ಕಿಚ್ಚ ಸುದೀಪ್ ಗೆ ಸರ್ಪೈಸ್ ಕೊಡಲು ಪ್ರಿಯಾ ಕೂಡಾ ಬಂದಿದ್ದರು.
ವೇದಿಕೆಯಲ್ಲಿದ್ದ ಸೊಸೆ ಮತ್ತು ಮಗನ ಬಗ್ಗೆ ವಿಡಿಯೋ ಮೂಲಕ ಕಿಚ್ಚ ಸುದೀಪ್ ತಂದೆ ಸಂಜೀವ್ ಮನಸ್ಸು ಬಿಚ್ಚಿ ಮಾತನಾಡಿದ್ದಾರೆ. ಈ ವೇಳೆ ತಮ್ಮ ಸೊಸೆ ಬಗ್ಗೆ ಕೊಂಡಾಡಿದ್ದಾರೆ. ಸುದೀಪ್ ಮಾಡುವ ತಪ್ಪುಗಳನ್ನೆಲ್ಲಾ ತಿದ್ದಿ, ನನ್ನ ಪತ್ನಿ ಮಾಡುತ್ತಿದ್ದ ಎಲ್ಲಾ ಸಮಾಜಮುಖೀ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗುತ್ತಿರುವ ದೇವತೆ ಆಕೆ ಎಂದು ಹೊಗಳಿದ್ದಾರೆ.
ಜೊತೆಗೆ ಬಿಗ್ ಬಾಸ್ ನಿರೂಪಣೆ ಸಾಕು ಎಂದು ಗುಡ್ ಬೈ ಹೇಳಿದ್ದ ಕಿಚ್ಚನ ಮನವೊಲಿಸಿದ್ದೂ ಪ್ರಿಯಾ ಎಂದು ಬಹಿರಂಗಪಡಿಸಿದ್ದಾರೆ. ಬಿಗ್ ಬಾಸ್ ನಲ್ಲಿ ಜನ ನಿನ್ನನ್ನು ಇಷ್ಟಪಡ್ತಾರೆ. ಹೀಗಾಗಿ ಬಿಡಬೇಡ, ಮುಂದುವರಿಸು ಎಂದು ಸುದೀಪ್ ಮನವೊಲಿಸಿದವಳೂ ಅವಳೇ ಎಂದು ಸಂಜೀವ್ ಬಹಿರಂಗಪಡಿಸಿದ್ದಾರೆ. ಸಿನಿಮಾ ಕತೆಯಿಂದ ಹಿಡಿದು ಸುದೀಪ್ ನ ಜೀವನದ ಪ್ರಮುಖ ವಿಚಾರಗಳಲ್ಲಿ ಸಲಹೆ ನೀಡುತ್ತಾ ಅವನಿಗೆ ಮಾರ್ಗದರ್ಶನ ಮಾಡುತ್ತಾಳೆ ಎಂದಿದ್ದಾರೆ.