ಬೆಂಗಳೂರು: ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಇಂದು ಅಕ್ಷರಶಃ ಹಬ್ಬವಾಗಿರಲಿದೆ. ಯಾಕೆಂದರೆ ಇಂದು ಮ್ಯಾಕ್ಸ್ ಸಿನಿಮಾದ ಅಡಿಯೋ ಲಾಂಚ್ ಕಾರ್ಯಕ್ರಮವಿರಲಿದ್ದು, ಅಭಿಮಾನಿಗಳನ್ನು ಸುದೀಪ್ ಭೇಟಿ ಮಾಡಲಿದ್ದಾರೆ.
ಇಂದು ಸಂಜೆ 6.30 ರಿಂದ ಓರಿಯಾನ್ ಮಾಲ್ ನಲ್ಲಿ ಕಿಚ್ಚ ಸುದೀಪ್ ನಾಯಕರಾಗಿರುವ ಮ್ಯಾಕ್ಸ್ ಸಿನಿಮಾದ ಅಡಿಯೋ ಲಾಂಚ್ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್ ಸೇರಿದಂತೆ ಇಡೀ ಚಿತ್ರತಂಡ ಆಗಮಿಸಲಿದ್ದು, ಅಭಿಮಾನಿಗಳಿಗೆ ಮುಕ್ತ ಆಹ್ವಾನ ನೀಡಲಾಗಿದೆ.
ಕಳೆದ ಬಾರಿ ವಿಕ್ರಾಂತ್ ರೋಣ ಸಿನಿಮಾದ ಅಡಿಯೋ ಲಾಂಚ್ ನ್ನು ಲುಲು ಮಾಲ್ ನಲ್ಲಿ ನಡೆಸಲಾಗಿತ್ತು. ಈ ಸಿನಿಮಾ ಬಳಿಕ ಸುದೀಪ್ ನಾಯಕರಾಗಿರುವ ಯಾವುದೇ ಸಿನಿಮಾ ಬಿಡುಗಡೆಯಾಗಿರಲಿಲ್ಲ. ಬರೋಬ್ಬರಿ ಎರಡು ವರ್ಷದ ಬ್ರೇಕ್ ನಂತರ ಸುದೀಪ್ ಸಿನಿಮಾವೊಂದು ತೆರೆಗೆ ಬರುತ್ತಿದೆ ಎನ್ನುವುದೇ ಅಭಿಮಾನಿಗಳಿಗೆ ಸಂಭ್ರಮದ ವಿಚಾರವಾಗಿದೆ.
ಮ್ಯಾಕ್ಸ್ ಸಿನಿಮಾವನ್ನು ತಮಿಳಿನ ವಿಜಯ್ ಕಾರ್ತಿಕೇಯನ್ ನಿರ್ದೇಶಿಸಿದ್ದಾರೆ. ಈ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ರಿಲೀಸ್ ಆಗಲಿದೆ. ಡಿಸೆಂಬರ್ 25 ರಂದು ಕನ್ನಡದಲ್ಲಿ, ಡಿಸೆಂಬರ್ 27 ರಂದು ಇತರೆ ಭಾಷೆಗಳಲ್ಲಿ ಸಿನಿಮಾ ದೇಶದಾದ್ಯಂತ ತೆರೆ ಕಾಣಲಿದೆ. ಹೀಗಾಗಿ ಈಗ ಅಡಿಯೋ ಲಾಂಚ್ ಕಾರ್ಯಕ್ರಮದ ಮೂಲಕ ಅಧಿಕೃತವಾಗಿ ಚಿತ್ರದ ಪ್ರಚಾರ ಕಾರ್ಯ ಶುರುವಾಗಲಿದೆ.