Publish Date: Sun, 05 Mar 2023 (09:00 IST)
Updated Date: Sun, 05 Mar 2023 (09:22 IST)
ಬೆಂಗಳೂರು: ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ ಕಿಚ್ಚನ ಕರ್ನಾಟಕ ಬುಲ್ಡೋಜರ್ಸ್ ಮತ್ತೆ ಗೆಲುವು ಕಂಡಿದೆ. ಇದರೊಂದಿಗೆ ಸಿಸಿಎಲ್ ನಲ್ಲಿ ಕರ್ನಾಟಕ ಸತತ ಮೂರನೇ ಗೆಲುವು ಪಡೆದಿದೆ.
ನಿನ್ನೆಯ ಪಂದ್ಯದಲ್ಲಿ ಚೆನ್ನೈ ತಂಡದ ವಿರುದ್ಧ ಕರ್ನಾಟಕ 6 ವಿಕೆಟ್ ಗಳ ಗೆಲುವು ಕಂಡಿದೆ. ಮೊದಲ ಇನಿಂಗ್ಸ್ ನಲ್ಲಿ ಚೆನ್ನೈ 84 ರನ್ ಗಳಿಸಿತ್ತು. ಕರ್ನಾಟಕ 109 ರನ್ ಗಳಿಸಿತ್ತು. ದ್ವಿತೀಯ ಇನಿಂಗ್ಸ್ ನಲ್ಲಿ ರನ್ ಹಿನ್ನಡೆಯಿದ್ದರೂ ಅತ್ಯುತ್ತಮ ಬ್ಯಾಟಿಂಗ್ ನಡೆಸಿದ ಚೆನ್ನೈ 126 ರನ್ ಪೇರಿಸಿತು. ಇದಕ್ಕೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಕರ್ನಾಟಕ ಆರಂಭದ ಮೂರು ಓವರ್ ಗಳಲ್ಲಿ ಅತ್ತ ರನ್ ಗಳಿಸಲಾಗದೇ ಎರಡು ವಿಕೆಟ್ ಕಳೆದುಕೊಂಡು ಪರದಾಡಿತು. ಆಗ ಕರ್ನಾಟಕ ಸೋಲುವ ಭೀತಿಯಲ್ಲಿತ್ತು.
ಆದರೆ ಕಿಚ್ಚ ಸುದೀಪ್ ಔಟಾದ ಬಳಿಕ ಕ್ರೀಸ್ ಗೆ ಬಂದ ಬಚ್ಚನ್ ಪಂದ್ಯದ ಚಿತ್ರಣ ಬದಲಾಯಿಸಿದರು. ಮೊದಲ ಬಾಲ್ ನಿಂದಲೇ ಹೊಡೆತಕ್ಕೆ ಕೈ ಹಾಕಿದ ಬಚ್ಚನ್ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಮುಟ್ಟಿಸಿದರು. ಇವರಿಗೆ ತಕ್ಕ ಸಾಥ್ ನೀಡಿದ ಅನುಭವಿ ಜಯರಾಮ್ ಕಾರ್ತಿಕ್ ಕೂಡಾ 30 ರನ್ ಗಳಿಸಿ ಗೆಲುವಿನ ರೂವಾರಿಯಾದರು. ಇದರೊಂದಿಗೆ ಕರ್ನಾಟಕಕ್ಕೆ ಮುಂದಿನ ಪಂದ್ಯ ಔಪಚಾರಿಕವಾಗಲಿದೆ.