ಮುಂಬೈ: ಡಿ ವೈ ಪಾಟೀಲ್ ಮೈದಾನದಲ್ಲಿ ನಡೆಯುತ್ತಿರುವ ಮಹಿಳಾ ಐಪಿಎಲ್ ನ ಚೊಚ್ಚಲ ಆವೃತ್ತಿಯ ಮೊದಲ ಪಂದ್ಯದಲ್ಲೇ ಮುಂಬೈ ಇಂಡಿಯನ್ಸ್ ನಾಯಕಿ ಹರ್ಮನ್ ಪ್ರೀತ್ ಕೌರ್ ಅಬ್ಬರದ ಅರ್ಧಶತಕ ಸಿಡಿಸಿದ್ದಾರೆ.
ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 207 ರನ್ ಗಳ ಬೃಹತ್ ಮೊತ್ತ ಪೇರಿಸಿತು. ಆರಂಭಿಕರಾಗಿ ಕಣಕ್ಕಿಳಿದ ಯಶ್ತಿಕಾ ಭಾಟಿಯಾ ಕೇವಲ 1 ರನ್ ಗಳಿಸಿ ಔಟಾದರು. ಅದಾದ ಬಳಿಕ ಜೊತೆಗೂಡಿದ ಹೈಲಿ ಮ್ಯಾಥ್ಯೂಸ್ –ಸಿವರ್ ಬ್ರಂಟ್ ಜೋಡಿ ಅಬ್ಬರದ ಬ್ಯಾಟಿಂಗ್ ಗೆ ಮುನ್ನುಡಿ ಬರೆಯಿತು. ಮ್ಯಾಥ್ಯೂಸ್ 31 ಎಸೆತಗಳಲ್ಲಿ 47 ರನ್ ಸಿಡಿಸಿ ಔಟಾದರೆ ಬ್ರಂಟರ್ 23 ರನ್ ಗಳ ಕೊಡುಗೆ ನೀಡಿದರು.
ಬಳಿಕ ನಡೆದಿದ್ದು ಹರ್ಮನ್ ಪ್ರೀತ್ ಕೌರ್ ಅಬ್ಬರ. ಕೇವಲ 30 ಎಸೆತ ಎದುರಿಸಿದ ಹರ್ಮನ್ 65 ರನ್ ಚಚ್ಚಿದರು. ಇದರಲ್ಲಿ 14 ಬೌಂಡರಿ ಸೇರಿತ್ತು! ಮನಮೋಹಕ ಹೊಡೆತಗಳ ಮೂಲಕ ಹರ್ಮನ್ ಪ್ರೇಕ್ಷಕರನ್ನು ರಂಜಿಸಿದ್ದಲ್ಲದೆ, ಮಹಿಳಾ ಐಪಿಎಲ್ ನಲ್ಲಿ ಚೊಚ್ಚಲ ಅರ್ಧಶತಕ ಸಿಡಿಸಿದ ದಾಖಲೆ ಮಾಡಿದರು. ಇನ್ನೊಂದೆಡೆ ಅದ್ಭುತ ಸಾಥ್ ನೀಡಿದ ಅಮೆಲಿಯಾ ಕೇರ್ 24 ಎಸೆತಗಳಿಂದ 45 ರನ್ ಗಳಿಸಿದರು. ಇದರಲ್ಲಿ 6ಬೌಂಡರಿ ,1 ಸಿಕ್ಸರ್ ಸೇರಿತ್ತು. ಇದೀಗ ಗುಜರಾತ್ ಗೆಲ್ಲಲು 208 ರನ್ ಗಳಿಸಬೇಕಿದೆ.