ಬೆಂಗಳೂರು: ಸೂಪರ್ ಹಿಟ್ ಕಾಂತಾರ ಚಾಪ್ಟರ್ 1 ಸಿನಿಮಾ ಈಗ ಅಮೆಝೋನ್ ಪ್ರೈಮ್ ವಿಡಿಯೋದಲ್ಲಿ ವೀಕ್ಷಣೆಗೆ ಲಭ್ಯವಿದೆ. ಆದರೆ ಸಿನಿಮಾದ ಸಬ್ ಟೈಟಲ್ ಅವಾಂತರಗಳು ಈಗ ನೆಟ್ಟಿಗರಿಂದ ಭಾರೀ ಟೀಕೆಗೊಳಗಾಗಿದೆ.
ಕಾಂತಾರ ಚಾಪ್ಟರ್ 1 ಸಿನಿಮಾ ಪ್ರೇಕ್ಷಕರಿಗೆ ಅರ್ಥವಾಗಲಿ ಎಂಬ ಉದ್ದೇಶಕ್ಕೆ ಸಬ್ ಟೈಟಲ್ ಕೂಡಾ ಹಾಕಲಾಗುತ್ತಿದೆ. ಆದರೆ ಇಂಗ್ಲಿಷ್ ನಿಂದ ಕನ್ನಡಕ್ಕೆ ಬರುವಾಗ ಸಬ್ ಟೈಟಲ್ ಅರ್ಥ ಹೋಗಿ ಅನರ್ಥವಾಗುತ್ತಿದೆ. ಇದು ವೀಕ್ಷಕರ ಟೀಕೆಗೆ ಗುರಿಯಾಗಿದೆ.
ಉದಾಹರಣೆಗೆ ಬೆರ್ಮೆಯನ್ನು ಕಟ್ಟಿ ಹಾಕಿ ರಾಜ ಕುಲಶೇಖರ ಪ್ರಶ್ನೆ ಮಾಡುತ್ತಿರುವ ಸನ್ನಿವೇಶದಲ್ಲಿ ಸಬ್ ಟೈಟಲ್ ಸಂತಾನೋತ್ಪತ್ತಿ ಸಂಗೀತ ಎಂದು ಬರುತ್ತಿದೆ. ಇನ್ನು ಶಂಖದ ಹೊಡೆತಗಳು, ರಾಜಶೇಖರ ಗುಜುಗುಜುಗಳು, ಸುಡುವ ಲಾಗ್ ತುಣುಕುಗಳು ಎಂಬಿತ್ಯಾದಿ ಸಬ್ ಟೈಟಲ್ ಗಳು ಬರುತ್ತಿವೆ.
ಇದನ್ನು ನೋಡಿದ ಪ್ರೇಕ್ಷಕರು ಇಷ್ಟೆಲ್ಲಾ ಕೋಟಿ ಕೋಟಿ ಖರ್ಚು ಮಾಡಿ ಸಿನಿಮಾ ಮಾಡುತ್ತೀರಿ. ಇಂತಹ ಅನರ್ಥದ ಭಾಷಾಂತರ ಗಮನಿಸಲು ಆಗಲಿಲ್ಲವೇ? ಈ ರೀತಿ ಮಾಡಿ ಸಿನಿಮಾದ ಮರ್ಯಾದೆ ಯಾಕೆ ಕಳೆಯುತ್ತೀರಿ? ಎಐ ತಂತ್ರಜ್ಞಾನದ ಮೊರೆ ಹೋಗುವ ಬದಲು ಓರ್ವ ಸಮರ್ಥ ಭಾಷಾಂತರ ತಜ್ಞನನ್ನು ಕೂರಿಸಿಕೊಂಡು ಇಂತಹ ಪ್ರಮಾದಗಳನ್ನು ತಡೆಯಬಹುದಿತ್ತಲ್ಲವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.