ಮಂಗಳೂರು: ದೇಶವಿದೇಶದಲ್ಲೀ ಸದ್ದು ಮಾಡುತ್ತಿರುವ ಕಾಂತಾರ ಚಾಪ್ಟರ್ 1 ಸಿನಿಮಾಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ರಿಷಭ್ ಶೆಟ್ಟಿ, ನಿರ್ದೇಶನ ಹಾಗೂ ನಟನೆಗೆ ಸಿನಿಮಾ ರಂಗದ ಖ್ಯಾತ ನಟ, ನಟಿಯರು, ನಿರ್ದೇಶಕರು ಭಾರೀ ಮೆಚ್ಚುಗೆಯನ್ನು ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರ ನೋಡಿದವರು ರಿಷಬ್ ಶೆಟ್ಟಿಯ ಪ್ರತಿಭೆಯನ್ನು ಮೆಚ್ಚಿದ್ದಾರೆ. ಅವರನ್ನಷ್ಟೇ ಅಲ್ಲ, ಚಿತ್ರದ ಎಲ್ಲಾ ಪಾತ್ರ, ಗ್ರಾಫಿಕ್ಸ್, ಸಂಗೀತ, ಸಾಹಿತ್ಯ ಎಲ್ಲವೂ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ.
ಇನ್ನೂ ವಿಶೇಷವಾಗಿ ಈಚೆಗೆ ಹೃದಯಾಘಾತದಿಂದ ಸಾವನ್ನಪ್ಪಿದ ರಾಕೇಶ್ ಪೂಜಾರಿ ಅವರನ್ನು ದೊಡ್ಡ ಪರದೆಯಲ್ಲಿ ಕಂಡು ಮೆಚ್ಚಿಕೊಂಡಿದ್ದಾರೆ. ಚಿತ್ರದಲ್ಲಿ ನವೀನ್ ಡಿ ಪಡೀಲ್ ಮಗನಾಗಿ ಅವರು ನಟಿಸಿದ್ದಾರೆ. ಕೇವಲ ನಟಿಸಿಲ್ಲ, ವೀಕ್ಷಕರನ್ನು ಹೊಣ್ಣೆ ಹುಣ್ಣಾಗುವಂತೆ ನಗಿಸಿದ್ದಾರೆ.
ಕಾಂತಾರ ಸಿನಿಮಾದಲ್ಲಿ ಮಿಂಚಿರುವ ಬಾಲಿವುಡ್ ನಟ ಗುಲ್ಶನ್ ದೇವಯ್ಯ ರಾಕೇಶ್ ಬಗ್ಗೆ ಮೆಚ್ಚುಗೆಯನ್ನಾಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡ ಅವರು, ರಾಕೇಶ್‌ನನ್ನು ಹಾಡಿಹೊಗಳಿದ್ದಾರೆ. ನನಗೆ ರಾಕೇಶ್ ಪೂಜಾರಿಯ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ. ಆದರೆ ಜನರು ಆತನ ಮೇಲಿಟ್ಟಿರುವ ಪ್ರೀತಿಯನ್ನು ಹಾಗೂ ಆತನನ್ನು ನೆನಪಿಸಿಕೊಳ್ಳುವ ಪರಿಯನ್ನು ನಾನು ಗಮನಿಸುತ್ತಿದ್ದು, ಆತ ಎಂತಹ ಕಲಾವಿದ ಎಂಬುದರ ಅರಿವಾಗಿದೆ ಎಂಬರ್ಥದಲ್ಲಿ ಬರೆದುಕೊಂಡಿದ್ದಾರೆ.
ನಿಜವಾಗಿಯೂ ಅವರ ಬಗ್ಗೆ ತಿಳಿದಿರಲಿಲ್ಲ ಆದರೆ ಜನರು ಅವರನ್ನು ಎಷ್ಟು ಮಿಸ್ ಮಾಡಿಕೊಳ್ಳುತ್ತಾರೆಂದು ನನಗೆ ಅರ್ಥವಾಗುತ್ತಿದೆ ಎಂಬುದಾಗಿ ಪೋಸ್ಟ್‌ವೊಂದನ್ನು ರೀ ಪೋಸ್ಟ್ ಮಾಡಿ ಬರೆದುಕೊಂಡಿದ್ದಾರೆ.