ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ಧಾರವಾಹಿಗಳಲ್ಲಿ ಒಂದಾಗಿದ್ದ ಮುದ್ದುಲಕ್ಷ್ಮಿಯಲ್ಲಿ ನಟಿಸುತ್ತಿದ್ದ ನಟ ಚರಿತ್ ಬಾಳಪ್ಪ ಈಗ ಗೆಳತಿಗೆ ಲೈಂಗಿಕ ಕಿರುಕುಳ, ಹಲ್ಲೆ ಮಾಡಿದ ಆರೋಪದಲ್ಲಿ ಅರೆಸ್ಟ್ ಆಗಿದ್ದಾರೆ.
ಕನ್ನಡ ಮತ್ತು ತೆಲುಗು ಧಾರವಾಹಿಗಳಲ್ಲಿ ನಟಿಸಿ ಖ್ಯಾತರಾಗಿದ್ದ ಸ್ಪುರದ್ರೂಪಿ ನಟ ಚರಿತ್. ಇದೀಗ ಅವರ ಮೇಲೆ ಗೆಳತಿಗೆ ಲೈಂಗಿಕ ಕಿರುಕುಳ, ಬೆದರಿಕೆ ಮತ್ತು ಹಲ್ಲೆ ಮಾಡಿದ ಆರೋಪ ಎದುರಾಗಿದೆ. ಈ ಸಂಬಂಧ ಆರ್ ಆರ್ ನಗರ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಚರಿತ್ ನಿಂದ ಅನ್ಯಾಯಕ್ಕೊಳಗಾದ ಯುವತಿ ಕೂಡಾ ನಟಿಯಾಗಿದ್ದು ಆಕೆಯೇ ದೂರು ನೀಡಿದ್ದಳು.
ಚರಿತ್ ಗೆ ಈಗಾಗಲೇ ಮದುವೆಯಾಗಿ ವಿಚ್ಛೇದನವೂ ಆಗಿತ್ತು. ಇದೀಗ ನನ್ನನ್ನು ಪ್ರೀತಿಸುತ್ತೇನೆ ಎಂದು ಹಿಂದೆ ಬಿದ್ದು ಕಾಟ ಕೊಡುತ್ತಿದ್ದ. ದೈಹಿಕ ಸಂಪರ್ಕಕ್ಕೆ ಒತ್ತಾಯಿಸಿದ್ದ. ಒಪ್ಪದೇ ಇದ್ದಾಗ ಹಲ್ಲೆ ನಡೆಸಿದ್ದಾನೆ. ಜೊತೆಗೆ ನಮ್ಮಿಬ್ಬರ ಖಾಸಗಿ ಫೋಟೋ ವಿಡಿಯೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಯಬಿಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ ಎಂದು ಯುವತಿ ದೂರಿನಲ್ಲಿ ತಿಳಿಸಿದ್ದಾಳೆ.
ಚರಿತ್ ಗೆ ಈಗಾಗಲೇ ಒಂದು ಮದುವೆಯಾಗಿ ಪತ್ನಿಯಿಂದ ವಿಚ್ಛೇದನ ಪಡೆದಿದ್ದರು. ವಿಚ್ಛೇದನದ ಬಳಿಕ ಪತ್ನಿಯ ಜೊತೆಗೂ ಕಿರಿಕ್ ಆಗಿ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. ಪತ್ನಿಗೆ ಪರಿಹಾರ ಹಣ ಕೊಡದೇ ಚರಿತ್ ಸತಾಯಿಸಿದ್ದರು ಎನ್ನಲಾಗಿದೆ. ಪರಿಹಾರ ಕೇಳಿ ಪತ್ನಿ ನೋಟಿಸ್ ನೀಡಿದ್ದಕ್ಕೆ ಬೆದರಿಕೆ ಹಾಕಿದ್ದ ಎಂದು ಪತ್ನಿಯೇ ಪೊಲೀಸರಿಗೆ ದೂರು ನೀಡಿದ್ದರು.