ಬೆಂಗಳೂರು: ಯಕ್ಷಗಾನ ಕಲಾವಿದರಲ್ಲಿ ಬಹುತೇಕರು ಸಲಿಂಗಿಗಳು ಇರುತ್ತಿದ್ದರು ಎಂದು ವಿವಾದಾತ್ಮಕ ಹೇಳಿಕೆ ನೀಡಿ, ಚರ್ಚೆಗೆ ಗುರಿಯಾಗಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೋ.ಪುರುಷೋತ್ತಮ ಬಿಳಿಮಲೆ ಅವರು ಇದೀಗ ಹೇಳಿಕೆಗೆ ಕ್ಷಮೆಯಾಚಿಸಿದ್ದಾರೆ.
ಮೈಸೂರಿನ ಮಾನಸಗಂಗೋತ್ರಿ ಪ್ರಸಾರಾಂಗದಲ್ಲಿ ಮಂಗಳವಾರ ಧರೆಗೆ ದೊಡ್ಡವರ ಕಾವ್ಯದ ಏಳು ಪಠ್ಯಗಳು ಹಾಗೂ ನಾವು ಕೂಗುವ ಕೂಗು ಕೃತಿಗಳನ್ನು ಬಿಡುಗಡೆ ಮಾಡಿ ಪುರುಷೋತ್ತಮ ಬಿಳಿಮಲೆ ಮಾತನಾಡಿದ್ದರು. ಈ ಸಂದರ್ಭದಲ್ಲಿ ಅವರು ನೀಡಿದ್ದ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿತ್ತು.
ಇದರ ಬೆನ್ನಲ್ಲೇ ಯಕ್ಷಗಾನ ಕಲಾವಿದರಿಗೆ ನಾನು ಅವಮಾನ ಮಾಡಿಲ್ಲ. ನನ್ನ ಹೇಳಿಕೆಯಿಂದ ಬೇಸರವಾಗಿದ್ದರೆ ನಾನು ವಿಷಾಧಿಸುತ್ತೇನೆ ಎಂದರು.
ಮಾಧ್ಯಮವೊಂದಕ್ಕೆ ಪ್ರತಿಕ್ರಿಯಿಸಿದ ಅವರು ಪ್ರಸ್ತುತ ಸಲಿಂಗಕಾಮವಿಲ್ಲ. ಆದರೆ ಇದೆಲ್ಲ 60, 70ರ ದಶಕದಲ್ಲಿತ್ತು. ನಾನು ವಿದ್ಯಾರ್ಥಿ ಬದುಕಿನಲ್ಲಿ ನೋಡಿದ್ದನ್ನು ಹೇಳಿದ್ದೇನೆ. ಯಾರಿಗೂ ನೋವುಂಟು ಮಾಡುವ ಉದ್ದೇಶ ನನ್ನದ್ದಲ್ಲ ಎಂದರು.
ನಾನು ಕಳೆದ 30 ವರ್ಷಗಳಿಂದ ಯಕ್ಷಗಾನವನ್ನು ಮಾಡುತ್ತಿದ್ದು, ಈಗಾಲೂ ತಾಳಮದ್ದಲೆ ಅರ್ಥವನ್ನು ಹೇಳುತ್ತಿರುತ್ತೇನೆ. ನನಗೆ ಯಕ್ಷಗಾನದ ಬಗ್ಗೆ ಬಹಳಷ್ಟು ಗೌರವಿದೆ ಎಂದರು.