ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರು ತಿಂಗಳಿನಿಂದ ನ್ಯಾಯಾಂಗ ಬಂಧನದಲ್ಲಿದ್ದ ಪವಿತ್ರಾ ಗೌಡಗೆ ಕೊನೆಗೂ ಜಾಮೀನು ಸಿಕ್ಕಿದೆ. ಈ ಸುದ್ದಿ ತಿಳಿಯುತ್ತಿದ್ದಂತೇ ಅವರು ಯಾವ ರೀತಿ ರಿಯಾಕ್ಟ್ ಮಾಡಿದರು ಗೊತ್ತಾ?
ಪವಿತ್ರಾ ಗೌಡ ಪ್ರಕರಣದಲ್ಲಿ ಎ1 ಆರೋಪಿಯಾಗಿದ್ದಾರೆ. ಜೂನ್ 11 ರಂದು ದರ್ಶನ್ ಜೊತೆಗೆ ಅವರೂ ಬಂಧಿತರಾಗಿದ್ದರು. 15 ದಿನಗಳ ಪೊಲೀಸ್ ಕಸ್ಟಡಿ ಬಳಿಕ ಪವಿತ್ರಾ ಕೂಡಾ ಇತರೆ ಆರೋಪಿಗಳ ಜೊತೆ ನ್ಯಾಯಾಂಗ ಬಂಧನಕ್ಕೊಳಗಾಗಿದ್ದರು. ಅದರಂತೆ ಅವರು ಕಳೆದ 6 ತಿಂಗಳಿನಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ.
ಇದರ ನಡುವೆ ಒಮ್ಮೆ ಜಾಮೀನು ಅರ್ಜಿ ತಿರಸ್ಕೃತವಾಗಿತ್ತು. ಇದೀಗ ಕೊನೆಗೂ ಹೈಕೋರ್ಟ್ ಪವಿತ್ರಾ, ದರ್ಶನ್, ಪ್ರದೋಷ್, ನಾಗರಾಜು, ಲಕ್ಷ್ಮಣ್, ಅನುಕುಮಾರ್ ಸೇರಿದಂತೆ ಏಳು ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿದೆ. ಇದು ಪವಿತ್ರಾ ಹಾಗೂ ದರ್ಶನ್ ಇಬ್ಬರಿಗೂ ನಿರಾಳತೆ ತಂದಿದೆ.
ಜಾಮೀನು ಸಿಕ್ಕ ಸುದ್ದಿ ತಿಳಿದ ತಕ್ಷಣ ಪವಿತ್ರಾ ಸಹ ಖೈದಿಗಳೊಂದಿಗೆ ಕಣ್ಣೀರು ಹಾಕಿ ಸಂತೋಷ ವ್ಯಕ್ತಪಡಿಸಿದ್ದಾರಂತೆ. ಕೊನೆಗೂ ಆರು ತಿಂಗಳ ಜೈಲು ವಾಸಕ್ಕೆ ಬ್ರೇಕ್ ಬಿದ್ದಿರುವುದರಿಂದ ತುಂಬಾ ಸಂತೋಷಗೊಂಡರು ಎಂದು ತಿಳಿದುಬಂದಿದೆ. ಈ ಖುಷಿಯನ್ನು ಸಹ ಖೈದಿಗಳೊಂದಿಗೆ ಹಂಚಿಕೊಂಡಿದ್ದಾರೆ ಎನ್ನಲಾಗಿದೆ.