ಬೆಂಗಳೂರು: ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ಬಂಧಿತರಾಗಿದ್ದ ನಟ ದರ್ಶನ್ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಇಂದು ಮಹತ್ವದ ದಿನವಾಗಿದೆ. ಇಂದು ಆರೋಪಿಗಳ ಜಾಮೀನು ಭವಿಷ್ಯ ತೀರ್ಮಾನವಾಗಲಿದೆ.
ನಟ ದರ್ಶನ್ ಈಗಾಗಲೇ ಬೆನ್ನು ನೋವಿಗೆ ಚಿಕಿತ್ಸೆ ಪಡೆಯುವ ಉದ್ದೇಶದಿಂದ ಮಧ್ಯಂತರ ಜಾಮೀನು ಪಡೆದು ಹೊರಬಂದಿದ್ದಾರೆ. ಈ ನಡುವೆ ಅವರು ನಾರ್ಮಲ್ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಅವರ ಜೊತೆಗೆ ಎ1 ಆರೋಪಿ ಪವಿತ್ರಾ ಗೌಡ, ಪ್ರದೋಷ್, ನಾಗರಾಜ್, ಲಕ್ಷ್ಮಣ್, ಅನುಕುಮಾರ್, ಜಗದೀಶ್ ಕೂಡಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ಇವರೆಲ್ಲರ ಜಾಮೀನು ಅರ್ಜಿ ವಿಚಾರಣೆ ನಡೆಸಿರುವ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ಇಂದು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ನೇತೃತ್ವದ ಪೀಠ ಮಧ್ಯಾಹ್ನ 2.30 ರ ಬಳಿಕ ತೀರ್ಪು ಪ್ರಕಟಿಸಲಿದೆ. ಈ ತೀರ್ಪಿನಲ್ಲಿ ಯಾರಿಗೆ ಸಿಹಿ ಯಾರಿಗೆ ಕಹಿ ಎನ್ನುವುದು ತಿಳಿದುಬರಲಿದೆ.
ದರ್ಶನ್ ಹೊರತಾಗಿ ಇತರೆ ಆರೋಪಿಗಳು ಜೂನ್ ನಿಂದ ಜೈಲಿನಲ್ಲಿಯೇ ಇದ್ದಾರೆ. ಇದಕ್ಕೆ ಮೊದಲು ಪವಿತ್ರಾ ಗೌಡ ಜಾಮೀನು ಅರ್ಜಿ ಸಲ್ಲಿಸಿದ್ದರೂ ತಿರಸ್ಕೃತಗೊಂಡಿತ್ತು. ಇದೀಗ ಮತ್ತೊಮ್ಮೆ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಸಿಹಿ ಸುದ್ದಿಯ ನಿರೀಕ್ಷೆಯಲ್ಲಿದ್ದಾರೆ. ಇನ್ನು ದರ್ಶನ್ ಪಾಲಿಗೆ ಈ ಜಾಮೀನು ತೀರ್ಪು ಮಹತ್ವದ್ದಾಗಿರಲಿದೆ. ಯಾಕೆಂದರೆ ಈಗಾಗಲೇ ಅವರು ಶಸ್ತ್ರಚಿಕಿತ್ಸೆ ನೆಪದಲ್ಲಿ ಜಾಮೀನು ಪಡೆದರೂ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ ಎನ್ನುವ ಆರೋಪವಿದೆ. ಹೀಗಾಗಿ ಈಗ ಅವರಿಗೆ ನಾರ್ಮಲ್ ಜಾಮೀನು ಮಂಜೂರಾದರೆ ಸದ್ಯದ ಮಟ್ಟಿಗೆ ಅವರು ನಿರಾಳರಾಗಲಿದ್ದಾರೆ.