ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಆರೋಪಿ ನಟ ದರ್ಶನ್ ಗೆ ಇಂದು ಬೆನ್ನುಹುರಿಗೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ ನಡೆಯಲಿದ್ದು ಇದುವೇ ಅವರಿಗೆ ಮುಂದೆ ಜಾಮೀನು ಸಿಗಲೂ ಪ್ಲಸ್ ಪಾಯಿಂಟ್ ಆಗುವ ಸಾಧ್ಯತೆಯಿದೆ.
ನಟ ದರ್ಶನ್ ಗೆ ತೀವ್ರ ಬೆನ್ನು ನೋವಿರುವ ಕಾರಣ ಹೈಕೋರ್ಟ್ ಮಧ್ಯಂತರ ಜಾಮೀನು ನೀಡಿತ್ತು. ಕಳೆದ ಒಂದು ತಿಂಗಳಿನಿಂದ ಆಸ್ಪತ್ರೆಯಲ್ಲೇ ಇರುವ ದರ್ಶನ್ ಗೆ ಇದುವರೆಗೆ ಶಸ್ತ್ರಚಿಕಿತ್ಸೆಯಾಗಿರಲಿಲ್ಲ. ಇದರ ಬಗ್ಗೆ ನ್ಯಾಯಾಲಯಕ್ಕೆ ಪೊಲೀಸರು ಆಕ್ಷೇಪಣೆಯನ್ನೂ ಸಲ್ಲಿಸಿದ್ದರು. ಆದರೆ ಬಿಪಿ ಹೆಚ್ಚು ಕಡಿಮೆಯಾಗುತ್ತಿದ್ದುದರಿಂದ ಶಸ್ತ್ರಚಿಕಿತ್ಸೆ ನಡೆಸಿಲ್ಲ ಎಂದು ದರ್ಶನ್ ಪರ ವಕೀಲರು ವರದಿ ನೀಡಿದ್ದರು.
ಇದೀಗ ಇಂದು ಶಸ್ತ್ರಚಿಕಿತ್ಸೆ ನಡೆಯಲಿದೆ. ಇದರ ಜೊತೆಗೆ ದರ್ಶನ್ ಮಧ್ಯಂತರ ಜಾಮೀನು ವಿಸ್ತರಣೆಯಾಗಿದೆ. ಇನ್ನೊಂದೆಡೆ ಅವರ ನಾರ್ಮಲ್ ಜಾಮೀನು ಅರ್ಜಿಯ ತೀರ್ಪು ಪ್ರಕಟಣೆಯನ್ನು ಹೈಕೋರ್ಟ್ ಕಾಯ್ದಿರಿಸಿದೆ. ಇಂದು ಶಸ್ತ್ರಚಿಕಿತ್ಸೆಗೊಳಗಾಗಲಿರುವ ದರ್ಶನ್ ಗೆ ಈಗ ಇದುವೇ ವರದಾನವಾಗುವ ಸಾಧ್ಯತೆಯಿದೆ.
ಶಸ್ತ್ರಚಿಕಿತ್ಸೆ ಬಳಿಕ ಕೆಲವು ದಿನ ವಿಶ್ರಾಂತಿ ಅಗತ್ಯವಿರುತ್ತದೆ. ಹೀಗಾಗಿ ಇದೇ ಕಾರಣವನ್ನಿಟ್ಟುಕೊಂಡು ಮತ್ತಷ್ಟು ದಿನಗಳ ಕಾಲ ಜಾಮೀನು ವಿಸ್ತರಣೆಗೆ ಅವಕಾಶ ಕೇಳಬಹುದು. ಇದರ ನಡುವೆ ಮಾಮೂಲಿ ಜಾಮೀನು ಕೂಡಾ ಇದೇ ನೆಪದಲ್ಲಿ ಸಿಕ್ಕರೂ ಅಚ್ಚರಿಯಿಲ್ಲ. ಹೀಗಾಗಿ ದರ್ಶನ್ ಗೆ ಈಗ ಶಸ್ತ್ರಚಿಕಿತ್ಸೆಯೇ ವರದಾನವಾಗಲಿದೆ.