ಗೋಲ್ಡನ್ ಸ್ಟಾರ್ ಗಣೇಶ್ ಅವರ ಹೋಂ ಬ್ಯಾನರಿನಲ್ಲಿ ನಿರ್ಮಾಣಗೊಂಡಿರುವ ಮೊದಲ ಚಿತ್ರ ಗೀತಾ. ಸೈಯದ್ ಸಲಾಂ ಸಹಕಾರದೊಂದಿಗೆ ಶಿಲ್ಪಾ ಗಣೇಶ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಹಲವಾರು ವರ್ಷಗಳಿಂದ ಹೋಂ ಬ್ಯಾನರಿನ ಕನಸು ಕಟ್ಟಿಕೊಂಡಿದ್ದ ಗಣೇಶ್, ಅದರಿಂದ ನಿರ್ಮಾಣವಾಗೋ ಚಿತ್ರ ಹೊಸಾ ರೀತಿಯಲ್ಲಿರಬೇಕೆಂಬ ಆಸೆ ಹೊಂದಿದ್ದರು. ನವ ನಿರ್ದೇಶಕ ವಿಜಯ್ ನಾಗೇಂದ್ರ ಕಥೆಯೂ ಅದಕ್ಕೆ ತಕ್ಕುದಾಗಿದ್ದುದರಿಂದ ಗೀತಾ ಸಿನಿಮಾ ಜೀವ ಪಡೆದುಕೊಂಡಿದೆ.
ಈವರೆಗಿನ ಒಂದಷ್ಟು ಚಿತ್ರಗಳಲ್ಲಿ ಗಣೇಶ್ಗೆ ಇಬ್ಬಿಬ್ಬರು ನಾಯಕಿಯರು ಜೊತೆಯಾಗಿದ್ದಿದೆ. ಆದರೆ ಕನ್ನಡ ಪರ ಹೋರಾಟದ ಕಥೆ ಹೊಂದಿರೋ ಗೀತಾದಲ್ಲಿ ಮೂವರು ನಾಯಕಿಯರು ಗಣೇಶ್ಗೆ ಸಾಥ್ ಕೊಟ್ಟಿದ್ದಾರೆ!
ಸೈಯದ್ ಸಲಾಮ್ ಅವರ ಸಹಕಾರದೊಂದಿಗೆ ಶಿಲ್ಪಾ ಗಣೇಶ್ ನಿರ್ಮಾಣ ಮಾಡಿರೋ ಈ ಚಿತ್ರದಲ್ಲಿ ಪ್ರಯಾಗಾ ಮಾರ್ಟಿನ್, ಶಾನ್ವಿ ಶ್ರೀವಾತ್ಸವ್ ಮತ್ತು ಪಾರ್ವತಿ ಅರುಣ್ ಗೀತಾ ಚಿತ್ರದ ನಾಯಕಿಯರಾಗಿ ನಟಿಸಿದ್ದಾರೆ. ಈ ಚಿತ್ರ ಕನ್ನಡಿಗರಲ್ಲಿ ಭಾಷೆಯ ಉಳಿವಿಗಾಗಿ ಹೋರಾಡೋ ಕಿಚ್ಚು ಹೊತ್ತಿಸೋ ವಿಚಾರಗಳನ್ನೊಳಗೊಂಡಿದೆ ಎಂಬ ಸಂಗತಿ ಈಗಾಗಲೇ ಜಾಹೀರಾಗಿದೆ. ಹಾಗಿದ್ದ ಮೇಲೆ ಮೂವರು ನಾಯಕಿಯರು ಯಾಕಿದ್ದಾರೆ ಎಂಬಂತಾ ಪ್ರಶ್ನೆ ಪ್ರೇಕ್ಷಕರಲ್ಲಿದೆ. ಆದರೆ ಇದುವರೆಗೂ ಗೀತಾ ಬಗ್ಗೆ ಒಂದಷ್ಟು ಇಂಟರೆಸ್ಟಿಂಗ್ ಅಂಶಗಳನ್ನು ಬಿಟ್ಟುಕೊಟ್ಟಿರೋ ನಿರ್ದೇಶಕರು ಈ ವಿಚಾರದಲ್ಲಿ ಮಾತ್ರ ಸಣ್ಣ ಸುಳಿವನ್ನೂ ಬಿಟ್ಟು ಕೊಟ್ಟಿಲ್ಲ.
ಖಂಡಿತಾ ಈ ಮೂವರು ನಾಯಕಿಯರನ್ನು ಗ್ಲಾಮರ್ ಉದ್ದೇಶದಿಂದ ಕರೆತಂದಿಲ್ಲ. ಈ ವಿಶಿಷ್ಟವಾದ ಕಥೆ ಮೂವರು ನಾಯಕಿಯರ ಬೇಡಿಕೆಯಿಟ್ಟಿದ್ದರಿಂದ ಪ್ರಯಾಗಾ ಮಾರ್ಟಿನ್, ಶಾನ್ವಿ ಶ್ರೀವಾತ್ಸವ್ ಮತ್ತು ಪಾರ್ವತಿ ಅರುಣ್ ಗಣೇಶ್ಗೆ ಜೋಡಿಗಳಾಗಿ ನಟಿಸಿದ್ದಾರೆ. ಅವರೆಲ್ಲರಿಗೂ ಕೂಡಾ ಗಟ್ಟಿತನ ಹೊಂದಿರೋ ಪಾತ್ರಗಳನ್ನು ವಿಜಯ್ ನಾಗೇಂದ್ರ ಸೃಷ್ಟಿಸಿದ್ದಾರೆ. ಈ ಪಾತ್ರಗಳು ನಾಯಕನೊಂದಿಗೆ ಪ್ರೀತಿಯಲ್ಲಿ ಬೀಳೋದಕ್ಕಷ್ಟೇ ಸೀಮಿತ ಅಂತ ನೀವೇನಾದರೂ ಅಂದುಕೊಂಡಿದ್ದರೆ ಖಂಡಿತಾ ಗೀತಾದಲ್ಲಿ ಅಚ್ಚರಿಯ ಮೇಲೆ ಅಚ್ಚರಿ ಎದುರಾಗಲಿದೆ. ನಿಜಕ್ಕೂ ಈ ಪಾತ್ರಗಳ ಹಿಂದೆ ಅಂತಾದ್ದೇನಿದೆ ಅನ್ನೋದು ಇದೇ ತಿಂಗಳ 27ರಂದು ಬಯಲಾಗಲಿದೆ.