ಬೆಂಗಳೂರು: ಈ ಬಾರಿ ತಮ್ಮ ಹುಟ್ಟುಹಬ್ಬಕ್ಕೆ ಕಟೌಟ್, ಬ್ಯಾನರ್ ಕಟ್ಟಲು ಹೋಗಬೇಡಿ ಎಂದು ಸ್ವತಃ ಯಶ್ ಹೇಳಿದರೂ ಅಭಿಮಾನಿಗಳು ಕ್ಯಾರೇ ಎನ್ನದೇ ಕಟೌಟ್ ರೆಡಿ ಮಾಡುತ್ತಿದ್ದಾರೆ.
ಜನವರಿ 8 ಕ್ಕೆ ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬವಿದೆ. ಈ ಬಾರಿ ಯಶ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಈಗಾಗಲೇ ಹೇಳಿದ್ದಾರೆ. ಜೊತೆಗೆ ಕಳೆದ ವರ್ಷ ತಮ್ಮ ಬ್ಯಾನರ್ ಕಟ್ಟಲು ಹೋಗಿ ಇಬ್ಬರು ಅಭಿಮಾನಿಗಳು ಮೃತಪಟ್ಟಿದ್ದರಿಂದ ಬ್ಯಾನರ್ ಕಟ್ಟಬೇಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದರು. ನೀವು ಎಲ್ಲಿದ್ದೀರೋ ಅಲ್ಲಿಂದಲೇ ಶುಭ ಹಾರೈಸಿ ಸಾಕು ಎಂದಿದ್ದರು.
ಆದರೆ ಯಶ್ ಮಾತಿಗೂ ಅಭಿಮಾನಿಗಳು ಕ್ಯಾರೇ ಎನ್ನುತ್ತಿಲ್ಲ. ಅಖಿಲ ಕರ್ನಾಟಕ ರಾಕಿಂಗ್ ಸ್ಟಾರ್ ಯಶ್ ಅಭಿಮಾನಿ ಬಳಗ ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ಯಶ್ ರ ವಿಶೇಷ ಕಟೌಟ್ ನಿರ್ಮಿಸಲು ಮುಂದಾಗಿದೆ.
ಈ ಕಟೌಟ್ ನ್ನು ಹಣ್ಣುಗಳಿಂದಲೇ ಮಾಡುತ್ತಿರುವುದು ವಿಶೇಷ. ಯಶ್ ಹುಟ್ಟುಹಬ್ಬದಂದು 60x 40 ಗಾತ್ರದ ಹಣ್ಣಿನ ಕಟೌಟ್ ನಿರ್ಮಾಣಕ್ಕೆ ಈಗಾಗಲೇ ತಯಾರಿ ನಡೆದಿದೆ. ಬಹುಶಃ ಈ ರೀತಿ ಯಾವ ಸ್ಟಾರ್ ನಟರ ಅಭಿಮಾನಿಗಳೂ ಪ್ರಯೋಗ ಮಾಡಿಲ್ಲ. ಈಗ ಯಶ್ ಅಭಿಮಾನಿಗಳು ಇಂತಹದ್ದೊಂದು ಪ್ರಯೋಗ ಮಾಡುತ್ತಿದ್ದಾರೆ.