ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬಕ್ಕೆ ಕೇವಲ ಒಂದು ವಾರ ಬಾಕಿಯಿದೆ. ಈ ಹಿನ್ನಲೆಯಲ್ಲಿ ತಮ್ಮ ಅಭಿಮಾನಿಗಳಿಗೆ ಯಶ್ ಮಹತ್ವದ ಸಂದೇಶವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದು ಅದಕ್ಕೆ ಕಾರಣವೂ ಇದೆ.
ಜನವರಿ 8 ರಂದು ಯಶ್ ಬರ್ತ್ ಡೇ ಇದೆ. ಕಳೆದ ಎರಡು ವರ್ಷಗಳಿಂದ ಯಶ್ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿಲ್ಲ. ಆದರೆ ಈ ಬಾರಿಯಾದರೂ ಅಭಿಮಾನಿಗಳಿಗೆ ಸಿಗಬಹುದು ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸುಳ್ಳಾಗಿದೆ. ಶೂಟಿಂಗ್ ಕಾರಣಕ್ಕೆ ಬೇರೆ ಊರಿನಲ್ಲಿರುವ ಕಾರಣ ಮನೆ ಹತ್ರ ಅಭಿಮಾನಿಗಳಿಗೆ ಸಿಗಲ್ಲ, ಯಾರೂ ಬರಬೇಡಿ ಎಂದು ಯಶ್ ಮನವಿ ಮಾಡಿದ್ದಾರೆ.
ಆದರೆ ಯಶ್ ಇಂತಹದ್ದೊಂದು ಮನವಿ ಮಾಡುತ್ತಿದ್ದಂತೇ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಯಶ್ ಹೀಗೆ ವಾರಕ್ಕೆ ಮುಂಚಿತವಾಗಿ ಅಭಿಮಾನಿಗಳಿಗೆ ಸಂದೇಶ ನೀಡಿರುವುದಕ್ಕೆ ಕಾರಣವೂ ಇದೆ. ಕಳೆದ ವರ್ಷ ಅವರ ಹುಟ್ಟುಹಬ್ಬದಂದೇ ನಡೆದಿದ್ದ ದುರಂತವೇ ಇದಕ್ಕೆ ಕಾರಣ.
ಯಶ್ ಕಳೆದ ವರ್ಷವು ಹುಟ್ಟುಹಬ್ಬದ ದಿನ ಗೋವಾದಲ್ಲಿ ಶೂಟಿಂಗ್ ನಲ್ಲಿದ್ದರು. ಈ ಕಾರಣಕ್ಕೆ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬ ಆಚರಿಸಿರಲಿಲ್ಲ. ಆದರೆ ಅವರ ಅಭಿಮಾನಿಗಳು ಬಿಡಬೇಕಲ್ಲ? ಯಶ್ ಕಟೌಟ್ ಹಾಕಿ, ಬ್ಯಾನರ್ ಹಾಕಿ ಹುಟ್ಟುಹಬ್ಬಕ್ಕೆ ತಯಾರಿ ನಡೆಸಿದ್ದರು. ಆದರೆ ಈ ನಡುವೆ ಇಬ್ಬರು ಅಭಿಮಾನಿಗಳು ಬ್ಯಾನರ್ ಕಟ್ಟುವಾಗ ವಿದ್ಯುತ್ ತಗುಲಿ ಸಾವನ್ನಪ್ಪಿದ್ದರು. ಹೀಗಾಗಿ ಯಶ್ ತಮ್ಮ ಇದ್ದಬದ್ದ ಕೆಲಸವನ್ನೆಲ್ಲಾ ಬಿಟ್ಟು ಅಭಿಮಾನಿಗಳ ಮನೆಗೆ ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಲ್ಲದೆ, ಪರಿಹಾರವನ್ನೂ ಘೋಷಿಸಿದ್ದರು. ಜೊತೆಗೆ ಅಭಿಮಾನ ಎಂದು ಯಾರೂ ಈ ರೀತಿ ಮಾಡಲು ಹೋಗಬೇಡಿ. ಮೊದಲು ನಿಮ್ಮ ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಿ ಎಂದಿದ್ದರು.
ಹೀಗಾಗಿ ಈ ವರ್ಷ ಹುಟ್ಟುಹಬ್ಬ ಆಚರಣೆಗೆ ವಾರಕ್ಕೆ ಮುಂಚೆಯೇ ಯಾರೂ ಬ್ಯಾನರ್, ಕಟೌಟ್ ಕಟ್ಟಲು ಹೋಗಬೇಡಿ. ನೀವು ಎಲ್ಲಿದ್ದೀರೊ ಅಲ್ಲಿಂದ ಶುಭ ಹಾರೈಸಿ. ನಿಮ್ಮ ಕುಟುಂಬದವರು ಹೆಮ್ಮೆಪಡುವಂತಹ ಕೆಲಸ ಮಾಡಿ. ಅದುವೇ ನನಗೆ ಆಶೀರ್ವಾದ ಎಂದು ಮೊದಲೇ ಮನವಿ ಮಾಡಿದ್ದಾರೆ.