ಬೆಂಗಳೂರು: ಆರೋಗ್ಯ ನೆಪವೊಡ್ಡಿ ಜಾಮೀನು ನೀಡಿ ಎಂದು ಮನವಿ ಸಲ್ಲಿಸಿದ್ದ ನಟ ದರ್ಶನ್ ಪ್ರಕರಣದಲ್ಲಿ ಕೋರ್ಟ್ ಆದೇಶ ನಾಳೆಗೆ ಕಾಯ್ದಿರಿಸಿದೆ. ಹೀಗಾಗಿ ದರ್ಶನ್ ಮತ್ತೆ ಜೈಲಿನಲ್ಲಿ ಕಾಲ ಕಳೆಯಬೇಕಾಗಿದೆ.
ದರ್ಶನ್ ಗೆ ತೀವ್ರ ಬೆನ್ನು ನೋವಿನ ಸಮಸ್ಯೆ ಕಾಡುತ್ತಿದೆ. ಅವರಿಗೆ ಪಾರ್ಶ್ವವಾಯು ಸಂಭವಿಸಬಹುದು ಎಂದು ವೈದ್ಯಕೀಯ ವರದಿ ಹೇಳಿದೆ ಎಂದು ಅವರ ಪರ ವಕೀಲ ಸಿವಿ ನಾಗೇಶ್ ವಾದ ಮಂಡಿಸಿದ್ದರು. ಇದಕ್ಕೆ ಇಂದು ಎಸ್ ಪಿಪಿ ಪ್ರಸನ್ನ ಕುಮಾರ್ ಆಕ್ಷೇಪಣೆ ಸಲ್ಲಿಸಿ ವಾದ ಮಂಡಿಸಿದ್ದಾರೆ.
ಸಿವಿ ನಾಗೇಶ್ ಮಂಡಿಸಿದ ವಾದಕ್ಕೆ ಪ್ರಸನ್ನ ಕುಮಾರ್ ಕೆಲವು ತಕರಾರು ಎತ್ತಿದ್ದಾರೆ. ವೈದ್ಯಕೀಯ ವರದಿ ಓದಿದ ಪ್ರಸನ್ನಕುಮಾರ್, ಮುಂದೆ ಸಮಸ್ಯೆಯಾಗಬಹುದು ಎಂದು ಹೇಳಿದ್ದಾರಷ್ಟೇ. ಈ ಹಿಂದೆ ಹಿಪ್ ಜಾಯಿಂಟ್ ಸಮಸ್ಯೆ ಸರಿಪಡಿಸಲಾಗಿತ್ತು. ಹಳೆಯ ಎಂಆರ್ ಐ ವರದಿ ಆಧರಿಸಿ ಅಂತಹ ಸಮಸ್ಯೆಯಿಲ್ಲ ಎನ್ನಲಾಗಿತ್ತು ಎಂದು ಪ್ರಸನ್ನಕುಮಾರ್ ಹೇಳಿದ್ದಾರೆ. ಆಗ ನ್ಯಾಯಾಧೀಶರು ಈಗ ಎಂಐಆರ್ ಐ ವರದಿ ಪ್ರಕಾರ ಸಮಸ್ಯೆಯಿರಬಹುದಲ್ವಾ ಎಂದು ಕೇಳಿದ್ದಾರೆ.
ಇನ್ನು ಎಷ್ಟು ದಿನ ಚಿಕಿತ್ಸೆ ಬೇಕು ಎಂಬುದನ್ನು ವರದಿಯಲ್ಲಿ ಹೇಳಿಲ್ಲ ಎಂದು ಪ್ರಸನ್ನಕುಮಾರ್ ಪ್ರಶ್ನೆ ಎತ್ತಿದ್ದಾರೆ. ಒಂದು ವೇಳೆ ಸರ್ಜರಿ ಮಾಡಿದರೆ ಗುಣಮುಖರಾಗಲು ಎಷ್ಟು ದಿನ ಬೇಕು ಎಂದು ಸ್ಪಷ್ಟನೆ ಬೇಕು ಎಂದಿದ್ದಾರೆ. ಇದನ್ನು ನ್ಯಾಯಾಧೀಶರು ಕೂಡಾ ಒಪ್ಪಿಕೊಂಡಿದ್ದು, ಇದನ್ನು ಹೇಳಲು ಮೆಡಿಕಲ್ ಬೋರ್ಡ್ ಅಭಿಪ್ರಾಯ ಬೇಕು ಎಂದಿದ್ದಾರೆ. ಆದರೆ ಅಡ್ಮಿಟ್ ಆಗುವ ಮೊದಲೇ ಇದನ್ನು ಹೇಳುವುದು ಹೇಗೆ ಎಂದು ದರ್ಶನ್ ಪರ ವಕೀಲ ಸಿವಿ ನಾಗೇಶ್ ಪ್ರತಿವಾದ ಮಂಡಿಸಿದದಾರೆ.
ಇನ್ನು, ನ್ಯಾಯಾಧೀಶರೂ ಎಲ್ಲಿ ಚಿಕಿತ್ಸೆ ಪಡೆಯಬೇಕೆಂದು ಬಯಸಿದ್ದೀರಿ, ನಿರ್ದಿಷ್ಟ ಆಸ್ಪತ್ರೆ ನಿಗದಿಪಡಿಸಿದ್ದೀರಾ ಎಂದು ಸಿವಿ ನಾಗೇಶ್ ಗೆ ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಉತ್ತರಿಸಿರುವ ಸಿವಿ ನಾಗೇಶ್ ಮೈಸೂರಿನ ಅಪೋಲೋ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತೇವೆ. ಬೆಂಗಳೂರಿನಲ್ಲಿ ಸಾಕ್ಷಿಗಳಿರುವ ಕಾರಣ ಅಲ್ಲಿ ಇರುವುದಿಲ್ಲ. ಅವರ ಆರೋಗ್ಯದ ಬಗ್ಗೆ ಕಾಲ ಕಾಲಕ್ಕೆ ಪೊಲೀಸರಿಗೆ ಮಾಹಿತಿ ನೀಡುತ್ತೇವೆ. ಹೀಗಾಗಿ ದರ್ಶನ್ ಗೆ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ಕೊಡಿ ಎಂದು ಸಿವಿ ನಾಗೇಶ್ ಕೇಳಿದ್ದಾರೆ.
ಎರಡೂ ಕಡೆ ವಾದ-ವಿವಾದ ಆಲಿಸಿದ ನ್ಯಾಯಾಧೀಶ ವಿಶ್ವಜಿತ್ ಶೆಟ್ಟಿ ಆದೇಶವನ್ನು ಕಾಯ್ದಿರಿಸಿದ್ದಾರೆ. ಸದ್ಯದ ಮಟ್ಟಿಗೆ ಈ ಎಲ್ಲಾ ಬೆಳವಣಿಗೆ ನೋಡುವುದಾದರೆ ಆರೋಗ್ಯದ ಹಿನ್ನಲೆಯಲ್ಲಿ ದರ್ಶನ್ ಗೆ ಮಧ್ಯಂತರ ಜಾಮೀನು ಸಿಗುವ ಸಾಧ್ಯತೆಯಿದೆ. ಹೀಗಾಗಿ ಈ ಬಾರಿ ದೀಪಾವಳಿ ದರ್ಶನ್ ಪಾಲಿಗೆ ಕಲರ್ ಫುಲ್ ಆಗಬಹುದು ಎನ್ನಬಹುದು.