Publish Date: Sat, 02 Sep 2017 (09:23 IST)
Updated Date: Sat, 02 Sep 2017 (09:25 IST)
ಬೆಂಗಳೂರು: ಚುನಾವಣೆ ಹತ್ತಿರ ಬರುತ್ತಿದ್ದಂತೆ ರಾಜಕೀಯ ಪಕ್ಷಗಳು ಸಿನಿಮಾ ತಾರೆಯರಿಗೆ ಬಲೆ ಹಾಕುವುದಕ್ಕೆ ಶುರು ಮಾಡಿವೆ. ದರ್ಶನ್ ಸೇರಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದ್ದರೆ, ಇತ್ತ ಬಿಜೆಪಿ ಸುದೀಪ್ ಗೆ ಗಾಳ ಹಾಕುತ್ತಿದೆ.
ದರ್ಶನ್ ಜತೆ ಕಾಂಗ್ರೆಸ್ ನಾಯಕರು ಮಾತುಕತೆ ನಡೆಸುವ ಪ್ರಯತ್ನದಲ್ಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಕಾಂಗ್ರೆಸ್ ನಾಯಕರೂ ಹೇಳಿಕೆ ನೀಡಿದ್ದರು. ಆದರೆ ದರ್ಶನ್ ಕಡೆಯಿಂದ ಯಾವುದೇ ಸುದ್ದಿ ಬಂದಿಲ್ಲ.
ಈ ಬೆಳವಣಿಗೆಗಳ ಬೆನ್ನಲ್ಲೇ ಬಿಜೆಪಿ ಕಿಚ್ಚ ಸುದೀಪ್ ರನ್ನು ಪಕ್ಷಕ್ಕೆ ಕರೆಸಿಕೊಳ್ಳಲು ಸರ್ವ ಪ್ರಯತ್ನ ನಡೆಸಿದೆ. ಆರ್. ಅಶೋಕ್ ಜತೆ ಉತ್ತಮ ಒಡನಾಟ ಹೊಂದಿರುವುದರಿಂದ ಸುದೀಪ್ ರನ್ನು ಒಲಿಸುವ ಹೊಣೆ ಅವರಿಗೇ ವಹಿಸಲಾಗಿದೆ ಎಂಬ ಸುದ್ದಿಗಳು ಕೇಳಿಬಂದಿವೆ.
ಸ್ವತಃ ಆರ್. ಅಶೋಕ್ ಕೂಡಾ ಸುದೀಪ್ ಕಳೆದ ಚುನಾವಣೆಯಲ್ಲಿ ನನ್ನ ಪರವಾಗಿ ಪ್ರಚಾರ ಮಾಡಿದ್ದರು. ಅವರು ಪಕ್ಷಕ್ಕೆ ಬಂದರೆ ಒಳ್ಳೆಯದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಯಾವ್ಯಾವ ನಟರು ಯಾವ್ಯಾವ ರಾಜಕೀಯ ಪಕ್ಷ ಸೇರುತ್ತಾರೆಂದು ಸದ್ಯದಲ್ಲೇ ಗೊತ್ತಾಗಲಿದೆ.