ಬೆಂಗಳೂರು: ಚಿತ್ರದುರ್ಗಾದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್, ಪವಿತ್ರಾ ಗೌಡ ಸೇರಿ 17 ಆರೋಪಿಗಳ ದೋಷಾರೋಪ ಮುಕ್ತಾಯವಾಗಿದೆ. ಎಲ್ಲ ಆರೋಪಿಗಳ ಸಹಿಯನ್ನು ಪಡೆದ ಕೋರ್ಟ್ ವಿಚಾರಣೆಯನ್ನು ನವೆಂಬರ್ 10ಕ್ಕೆ ವಿಚಾರಣೆಯನ್ನು ಮುಂದುವರೆಸಿದೆ.
ಬೆಂಗಳೂರಿನ 64ನೇ ಸಿಸಿಎಚ್ ನ್ಯಾಯಾಲಯಕ್ಕೆ ಹಾಜರಾದ ಆರೋಪಿಗಳು ತಮ್ಮ ಮೇಲಿನ ಎಲ್ಲಾ ಆರೋಪಗಳನ್ನು ನಿರಾಕರಿಸಿದ ಹಿನ್ನೆಲೆ ಮುಂದಿನ ಹಂತದಲ್ಲಿ ಸಾಕ್ಷ್ಯಗಳ ವಿಚಾರಣೆಯನ್ನು ನವೆಂಬರ್ 10 ಕ್ಕೆ ನಿಗದಿ ಮಾಡಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಎರಡನೇ ಭಾರೀ ಜೈಲು ಸೇರಿರುವ ನಟ ದರ್ಶನ್ ಹಾಗೂ ಗ್ಯಾಂಗ್‌ಗೆ ಇಂದು ಮಹತ್ವದ ದಿನವಾಗಿತ್ತು.
ಕೋರ್ಟ್ ಹಾಲ್‌ಗೆ ಆಗಮಿಸಿದ ಜಡ್ಜ್ ಈರಪ್ಪಣ್ಣ ಪವಡಿ ನಾಯ್ಕ್ ಅವರು ಮೊದಲಿಗೆ ಕೋರ್ಟ್‌ನಲ್ಲಿ ಕಿಕ್ಕಿರಿದ ವಕೀಲರನ್ನು ನೋಡಿ ವಿಚಾರಣೆ ನಡೆಸಲು ಒಪ್ಪಲಿಲ್ಲ. ಈ ರೀತಿ ಜಮಾಯಿಸಿದರೆ ಹೇಗೇ ವಿಚಾರಣೆ ನಡೆಸುವುದು ಎಂದು ಅಸಮಾಧಾನ ಹೊರಹಾಕಿದರು.
ಆ ಬಳಿಕ ಮುಚ್ಚಿದ ಕೊಠಡಿಯ ವಿಚಾರಣೆ ನಡೆಸಲಾಯಿತು.
ಕೊಲೆ ಸಂಬಂಧ ಅಪಹರಣ, ಸಾಕ್ಷಿನಾಶ ಸೇರಿದಂತೆ ಹಲವು ಆರೋಪಗಳನ್ನು ದರ್ಶನ್ ಮೇಲೆ ಹಾಕಲಾಗಿದ್ದು, ಎಲ್ಲವನ್ನೂ ಆರೋಪಿಗಳ ಎದುರು ಓದಿ ಹೇಳಲಾಯಿತು. ಈ ಆರೋಪಗಳನ್ನು ಒಪ್ಪಿಕೊಳ್ಳದ ಕಾರಣ ಸಾಕ್ಷ್ಯಗಳ ವಿಚಾರಣೆಗೆ ದಿನಾಂಕ ನಿಗದಿ ಮಾಡಲಾಗಿದೆ.