Publish Date: Thu, 01 Feb 2024 (14:37 IST)
Updated Date: Thu, 01 Feb 2024 (14:42 IST)
ಬೆಂಗಳೂರು: ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಇತ್ತೀಚೆಗೆ ತಮ್ಮ ತವರಿನ ಬಬ್ಬು ಸ್ವಾಮಿ ದೈವದ ನೇಮೋತ್ಸವದಲ್ಲಿ ಭಾಗಿಯಾಗಿದ್ದರು. ಈ ವೇಳೆ ಅವರಿಗೆ ದೈವ ಅಭಯ ನೀಡಿದೆ.
ರಕ್ಷಿತ್ ಆಗಾಗ ಮಂಗಳೂರಿನಲ್ಲಿರುವ ತಮ್ಮ ಮನೆಗೆ ಭೇಟಿ ನೀಡುತ್ತಿರುತ್ತಾರೆ. ದೈವ ಕೋಲದ ಬಗ್ಗೆ ಅಪಾರ ಭಕ್ತಿಯಿರುವ ರಕ್ಷಿತ್ ಇತ್ತೀಚೆಗೆ ಬಬ್ಬು ಸ್ವಾಮಿ ಕೋಲದಲ್ಲಿ ಭಾಗಿಯಾಗಿ ಪ್ರಸಾದ ಸ್ವೀಕರಿಸಿದ್ದರು. ಕರಾವಳಿ ಭಾಗದ ಧಾರ್ಮಿಕ ಕಾರ್ಯಕ್ರಮಗಳ ಬಗ್ಗೆ ರಕ್ಷಿತ್ ಗೆ ಈಗಲೂ ಮೊದಲಿನಷ್ಟೇ ಗೌರವವಿದೆ ಎಂಬುದಕ್ಕೆ ಇದೇ ಸಾಕ್ಷಿ. ಅಲೆವೂರು ಜೋಡು ರಸ್ತೆಯಲ್ಲಿ ನಡೆದ 118 ನೇ ನೇಮೋತ್ಸವದಲ್ಲಿ ಪಾಲ್ಗೊಂಡು ರಕ್ಷಿತ್ ಪೂಜೆ ನೆರವೇರಿಸಿದರು. ಜೊತೆಗೆ ತಮ್ಮ ಮುಂದಿನ ಯೋಜನೆಗಳಿಗೆ ಯಾವುದೇ ತೊಂದರೆಯಾಗದಂತೆ ದೈವದ ಮುಂದೆ ಬೇಡಿಕೊಂಡಿದ್ದಾರೆ. ಈ ವೇಳೆ ಅವರಿಗೆ ದೈವ ಅಭಯ ನೀಡಿದೆ.
ರಕ್ಷಿತ್ ಗೆ ದೈವ ನೀಡಿದ ಅಭಯವೇನು?
ನಿನ್ನ ಕೆಲಸ ಕಾರ್ಯಗಳಲ್ಲಿ ಧೈರ್ಯವಾಗಿ ಮುಂದೆ ಹೋಗು. ನಾನು ನಿನ್ನ ಜೊತೆಗಿದ್ದೆನೆ. ಯಾವುದೇ ವಿಘ್ನಗಳಾಗದಂತೆ ನೋಡಿಕೊಳ್ಳುತ್ತೇನೆ. ನಿನ್ನ ಹೆಸರು ಹಾಳು ಮಾಡಲು ಕೆಲವರು ಸಂಚು ಮಾಡುತ್ತಿದ್ದಾರೆ. ಅದು ನನಗೂ ಗೊತ್ತಾಗಿದೆ. ಅಂತಹ ದುಷ್ಟ ಶಕ್ತಿಗಳನ್ನು ನನ್ನ ಕಾಲ ಬುಡದಲ್ಲಿಟ್ಟು ನಿನ್ನ ಯೋಜನೆಗಳಿಗೆ ನಿನ್ನ ಬೆನ್ನುಲುಬಾಗಿ ನಿಲ್ಲುತ್ತೇನೆ ಎಂದು ರಕ್ಷಿತ್ ಗೆ ದೈವ ಧೈರ್ಯ ನೀಡಿದೆ.
ಇತ್ತೀಚೆಗಷ್ಟೇ ನಟ ರಕ್ಷಿತ್ ಶೆಟ್ಟಿ ರಿಚರ್ಡ್ ಆಂಟನಿ ಸಿನಿಮಾ ನಿರ್ಮಾಣದಿಂದ ಹೊಂಬಾಳೆ ಫಿಲಂಸ್ ಹಿಂದೆ ಸರಿದಿತ್ತು ಎಂಬ ಸುದ್ದಿಯಿದೆ. ಕೆಲವರು ಕರಾವಳಿ ನಟರು ತಮ್ಮವರನ್ನು ಮಾತ್ರ ಬೆಳೆಸುತ್ತಾರೆ ಎಂದು ಆಪಾದಿಸಿದ್ದರು. ಈ ಎಲ್ಲಾ ಬೆಳವಣಿಗೆ ಬೆನ್ನಲ್ಲೇ ದೈವ ಈ ರೀತಿ ಎಚ್ಚರಿಕೆ ಕೊಟ್ಟಿದ್ದು ವಿಶೇಷ.