ಹೈದರಾಬಾದ್: ಪ್ರೇಮಿಗಳ ದಿನಾಚರಣೆಯಂದ ಬಿಡುಗಡೆಯಾದ ಛಾವಾ ಚಿತ್ರ ಭಾರತ ಚಿತ್ರರಂಗದಲ್ಲಿ ಹೊಸ ಅಲೆಯನ್ನು ಎಬ್ಬಿಸಿದೆ. ಕೇವಲ 12 ದಿನಗಳಲ್ಲಿ ಈ ಸಿನಿಮಾ ₹500 ಕೋಟಿ ಕ್ಲಬ್ ಸೇರಿಕೊಂಡಿದೆ.
ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಈ ಚಿತ್ರಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಇದೇ ಫೆಬ್ರುವರಿ 14ರಂದು ಬಾಲಿವುಡ್‌ನಲ್ಲಿ ಬಿಡುಗಡೆಯಾಗಿರುವ ಈ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ₹515 ಕೋಟಿಗೂ ಅಧಿಕ ಗಳಿಕೆ ಕಂಡಿದೆ.
ಲಕ್ಷ್ಮಣ ಉಟೇಕರ್ ನಿರ್ದೇಶಿಸಿರುವ ಈ ಸಿನಿಮಾ ಇದೀಗ ಟಾಲಿವುಡ್‌ನಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ತೆಲುಗು ಭಾಷೆಯಲ್ಲಿ ಛಾವಾ ಸಿನಿಮಾವನ್ನು ಮಾರ್ಚ್ 7ರಿಂದ ಬಿಡುಗಡೆ ಮಾಡುತ್ತಿದ್ದೇವೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರು ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಮರಾಠಿ ಕಾದಂಬರಿಕಾರ ಶಿವಾಜಿ ಸಾವಂತ್ ಬರೆದಿರುವ ಛಾವಾ ಕೃತಿಯನ್ನು ಆಧರಿಸಿ ಮರಾಠಾ ದೊರೆ ಛತ್ರಪತಿ ಸಂಭಾಜಿ ಮಹಾರಾಜರ ಜೀವನ ಕುರಿತ ಚಿತ್ರ ಇದಾಗಿದೆ. ಸಂಭಾಜಿ ಪಾತ್ರದಲ್ಲಿ ವಿಕ್ಕಿ ಕೌಶಲ್ ಅವರು ಅಭಿನಯಿಸಿದ್ದು, ಸಂಭಾಜಿ ಪತ್ನಿ ಯಶುಬಾಯಿ ಪಾತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಇದ್ದಾರೆ. ಬಾಲಿವುಡ್ ನಟ ಅಕ್ಷಯ್ ಖನ್ನಾ ಪ್ರಮುಖ ಪಾತ್ರದಲ್ಲಿದ್ದಾರೆ.