ಬೆಂಗಳೂರು: ಜಾಮೀನು ಮೇಲೆ ಹೊರಬಂದಿರುವ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಮತ್ತೇ ಸಂಕಷ್ಟ ಎದುರಾಗಿದೆ. ಕೊಲೆ ಪ್ರಕರಣದಲ್ಲಿ ಹೊರಬಂದಿರುವ ದರ್ಶನ್ ಸೇರಿ ಇತರ 7ಆರೋಪಿಗಳ ಜಾಮೀನು ರದ್ದು ಕೋರಿ ಸುಪ್ರೀಂ ಕೋರ್ಟ್‌ಗೆ ಪೊಲೀಸರು ಮೇಲ್ಮನವಿ ಸಲ್ಲಿಸಿದ್ದಾರೆ.
ಬೆನ್ನುನೋವಿನಿಂದ ಬಳಲುತ್ತಿರುವ ನಟ ದರ್ಶನ್ ಸದ್ಯ ಮೈಸೂರಿನ ತಮ್ಮ ಫಾರ್ಮ್‌ಹೌಸ್‌ನಲ್ಲಿ ರಿಲ್ಯಾಕ್ಸ್ ಆಗುತ್ತಿದ್ದಾರೆ. ಆದರೆ ಇದರ ಬೆನ್ನಲ್ಲೇ ದರ್ಶನ್‌ಗೆ ಶಾಕ್ ಕಾದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಇಂದು ಪೊಲೀಸರು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಸುಪ್ರೀಂ ಕೋರ್ಟ್ ವಕೀಲ ಅನಿಲ್ ಸಿ ನಿಶಾನಿಯಿಂದ ಅರ್ಜಿ ಸಲ್ಲಿಕೆಯಾಗಿದ್ದು, ನಟ ದರ್ಶನ್, ಪವಿತ್ರಗೌಡ, ಲಕ್ಷ್ಮಣ್, ಪ್ರದೂಶ್, ನಾಗರಾಜು, ಅನುಕುಮಾರ್ ಹಾಗೂ ಜಗದೀಶ್ ಆರೋಪಿಗಳ ಜಾಮೀನು ರದ್ದು ಮಾಡಿವಂತೆ ಮನವಿ ಮಾಡಿದ್ದಾರೆ.
ಚಿತ್ರದುರ್ಗಾದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೂ 11 ರಂದು ನಟ ದರ್ಶನ್ ಸೇರಿ ಹಲವರು ಅರೆಸ್ಟ್ ಆಗಿದ್ದರು. ಹಲವು ಹಂತರ ಜಾಮೀನು ವಿಚಾರಣೆ ಬಳಿಕ ಕಳೆದ ಡಿಸೆಂಬರ್ 13ರಂದು ರಾಜ್ಯ ಹೈಕೋರ್ಟ್ ದರ್ಶನ್ ಸೇರಿ 7 ಆರೋಪಿಗಳಿಗೂ ಜಾಮೀನು ಮಂಜೂರು ಮಾಡಿತ್ತು.
ಜಾಮೀನು ಅಡಿಯಲ್ಲಿ ಹೊರಬಂದಿರುವ ನಟ ದರ್ಶನ್ ಈಚೆಗೆ ತಮ್ಮ ಆರೋಗ್ಯ ತಪಾಸಣೆಗೆ ಒಳಗಾಗಿದ್ದರು. ವಿಡಿಯೋದಲ್ಲಿ ದರ್ಶನ್ ನಡೆದಾಡಲು ಕಷ್ಟಪಡುತ್ತಿದ್ದರು. ಇದೀಗ ಕೊನೆಗೂ ದರ್ಶನ್ ಬೆನ್ನುನೋವಿನ ಸಮಸ್ಯೆಗೆ ಅಪರೇಷನ್ ಮಾಡಿಸಿಕೊಳ್ಳಲು ಒಪ್ಪಿಕೊಂಡಿದ್ದಾರೆಂಬ ಸುದ್ದಿಯಿದೆ.