ಬೆಂಗಳೂರು: ನಟ ದರ್ಶನ್ ಅವರ ಆರೋಗ್ಯ ತಪಾಸಣೆಯ ವರದಿ ಕೈ ಸೇರಿದ ಬಳಿಕ ಅವರಿಗೆ ಸರ್ಜಿಕಲ್ ಚೇರ್ ನೀಡಲು ಅನುಮತಿ ಸಿಕ್ಕಿದೆ.
ಕೆಲ ದಿನಗಳ ಹಿಂದೆ ನಟ ದರ್ಶನ್ ಅವರು ಡಿಜಿಪಿ ಬಳಿ ಬೆನ್ನುನೋವಿದೆ, ಸರ್ಜಿಕಲ್ ಚೇರ್ ನೀಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ವೈದ್ಯರು ತಪಾಸಣೆ ನಡೆಸಿ ವರದಿ ನೀಡಿದ್ದರು. ವೈದ್ಯರ ವರದಿಗಳನ್ನು ಪರಿಶೀಲಿಸಿದ ಬಳಿಕ ಸರ್ಜಿಕಲ್ ಚೇರ್ ನೀಡಲು ಅನುಮತಿ ಸಿಕ್ಕಿದೆ.
ದರ್ಶನ್ ಅವರಿಗೆ ಭಾನುವಾರ ಆರೋಗ್ಯ ತಪಾಸಣೆ ಮಾಡಲಾಗಿತ್ತು. ಅದಲ್ಲದೆ ಅವರ ಪತ್ನಿ ವಿಜಯಲಕ್ಷ್ಮೀ ಕೂಡಾ ಬೆನ್ನು ನೋವಿನ ಸಂಬಂಧ ವರದಿಯನ್ನು ನೀಡಿದ್ದರು. ಅದನ್ನು ಪರಿಗಣಿಸಲು ಸಾಧ್ಯವಿಲ್ಲ ಎಂದ ಜೈಲಾಧಿಕಾರಿಗಳು, ವಿಮ್ಸ್ ಆಸ್ಪತ್ರೆಯ ವೈದ್ಯರಿಂದ ತಪಾಸಣೆ ನಡೆಸಿದರು. ಇದೀಗ ಅದರ ವರದಿ ಕೈಸೇರಿದ್ದು ಅದರ ಅನುಸಾರ ಅವರಿಗೆ ಸರ್ಜಿಕಲ್ ಚೇರ್ ನೀಡಲು ಅನುಮತಿ ನೀಡಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ದರ್ಶನ್ಗೆ ಸರ್ಜಿಕಲ್ ಚೇರ್ ನೀಡಲು ಸಿದ್ಧತೆ ನಡೆದಿದೆ.
ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್ ಎ2 ಆರೋಪಿಯಾಗಿದ್ದು, ಸದ್ಯ ಪ್ರಕರಣದ ತನಿಖೆ ಅಂತಿಮ ಹಂತಕ್ಕೆ ಬಂದಿದ್ದು, ಪೊಲೀಸರು ಚಾರ್ಜ್ಶೀಟ್ ಸಲ್ಲಿಸಲು ತಯಾರಿಯಲ್ಲಿದ್ದಾರೆ.