Publish Date: Thu, 07 Mar 2024 (14:01 IST)
Updated Date: Thu, 07 Mar 2024 (14:05 IST)
ಚೆನ್ನೈ: ತಮಿಳು ಸ್ಟಾರ್ ನಟ ಅಜಿತ್ ಕುಮಾರ್ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಅಭಿಮಾನಿಗಳಲ್ಲಿ ಆತಂಕ ಮನೆ ಮಾಡಿದೆ. ಅಜಿತ್ ಗೆ ಏನಾಗಿದೆ ಎಂದು ಸೋಷಿಯಲ್ ಮೀಡಿಯಾ ಮೂಲಕ ಪ್ರಶ್ನಿಸುತ್ತಿದ್ದಾರೆ.
ಇಂದು ಅಜಿತ್ ಕುಮಾರ್ ಚೆನ್ನೈನ ಆಸ್ಪತ್ರೆಗೆ ದಾಖಲಾದ ಸುದ್ದಿ ತಿಳಿಯುತ್ತಿದ್ದಂತೇ ಅವರ ಅಭಿಮಾನಿಗಳು ಅವರಿಗೆ ಏನಾಗಿದೆ ಎಂದು ಕೇಳಲಾರಂಭಿಸಿದ್ದರು. ಅಜಿತ್ ರನ್ನು ಅಪೋಲೋ ಆಸ್ಪತ್ರೆಯಲ್ಲಿ ಕಂಡುಬಂದ ಸುದ್ದಿ ಕ್ಷಣದಲ್ಲಿ ವೈರಲ್ ಆಯ್ತು. ಆದರೆ ಅವರಿಗೆ ನಿಜಕ್ಕೂ ಏನಾಗಿದೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಯಿಲ್ಲ.
ಮೂಲಗಳ ಪ್ರಕಾರ ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತೊಂದು ಮೂಲದ ಪ್ರಕಾರ ಸಾಮಾನ್ಯ ತಪಾಸಣೆಗೆಂದು ಅಜಿತ್ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸ್ವತಃ ಅಜಿತ್ ತಂಡದಿಂದಲೇ ಸ್ಪಷ್ಟನೆ ಸಿಗುವವರೆಗೆ ಯಾವುದೇ ತೀರ್ಮಾನಕ್ಕೆ ಬರಲಾಗದು. ಸದ್ಯದಲ್ಲೇ ಅಜಿತ್ ತಂಡದಿಂದ ಸ್ಪಷ್ಟನೆ ಸಿಗುವ ಸಾಧ‍್ಯತೆಯಿದೆ.
ಮೊನ್ನೆಯಷ್ಟೇ ಅಜಿತ್ ತಮ್ಮ ಮಗನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದರು. ಮಗ ಅದ್ವೈತ್ ಗೆ ಫುಟ್ ಬಾಲ್ ಥೀಮ್ ನ ಪಾರ್ಟಿ ನೀಡಿದ್ದರು. ಪತ್ನಿ ಶಾಲಿನಿ, ಮಗನ ಜೊತೆಯಲ್ಲಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸಿನಿಮಾ ವಿಚಾರಕ್ಕೆ ಬಂದರೆ ಅಜಿತ್ ಇದೀಗ ವಿಡಾ ಮುಯರ್ಚಿ ಸಿನಿಮಾ ಶೂಟಿಂಗ್ ನಲ್ಲಿ ತೊಡಗಿಸಿಕೊಂಡಿದ್ದಾರೆ.