Publish Date: Fri, 21 Jul 2023 (16:46 IST)
Updated Date: Fri, 21 Jul 2023 (16:53 IST)
ಬೆಂಗಳೂರು: ಉಜಿರೆ ಎಸ್.ಡಿ.ಎಂ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಈಗ ಸಿನಿಮಾವಾಗಲಿದೆ. ಈ ಬಗ್ಗೆ ವಾಣಿಜ್ಯ ಮಂಡಳಿಯಲ್ಲಿ ಟೈಟಲ್ ನೋಂದಣಿಯಾಗಿದೆ.
ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣ ನಡೆದಿದ್ದು 2012 ರಲ್ಲಿ. ಈ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಂತೋಷ್ ರಾವ್ ನಿರ್ದೋಷಿ ಎಂದು ಈಗಾಗಲೇ ಸಿಬಿಐ ಕೋರ್ಟ್ ತೀರ್ಪು ನೀಡಿತ್ತು. ಸೌಜನ್ಯ ಮನೆಯವರೂ ಆತ ಕೊಲೆಗಾರನಲ್ಲ. ಧರ್ಮಾಧಿಕಾರಿ ವೀರೇಂದ್ರ ಹೆಗ್ಡೆಯವರ ಕುಟುಂಬಕ್ಕೆ ಆಪ್ತರಾಗಿರುವ ಕೆಲವರು ಈ ಕೃತ್ಯವೆಸಗಿದ್ದಾರೆ ಎಂದು ಆರೋಪಿಸುತ್ತಲೇ ಬಂದಿದ್ದಾರೆ. ಈ ಘಟನೆ ಬಗ್ಗೆ ಸೂಕ್ತ ರೀತಿಯಲ್ಲಿ ತನಿಖೆಯಾಗಿಲ್ಲ ಎಂಬುದು ಸೌಜನ್ಯ ಕುಟುಂಬಸ್ಥರ ಆರೋಪ. ಈ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಸೌಜನ್ಯ ಕುಟುಂಬ ಈಗಲೂ ಕೆಲವು ಸ್ಥಳೀಯ ಸಂಘಟನೆಗಳ ಸಹಾಯದೊಂದಿಗೆ ಹೋರಾಟ ನಡೆಸುತ್ತಿದೆ.
ಇದೀಗ ಇದೇ ಘಟನೆಯಾಧಾರವಾಗಿಟ್ಟುಕೊಂಡು ಜಿ.ಕೆ. ವೆಂಚರ್ಸ್ ಎಂಬ ನಿರ್ಮಾಣ ಸಂಸ್ಥೆ ಸ್ಟೋರಿ ಆಫ್ ಸೌಜನ್ಯ ಎಂಬ ಟೈಟಲ್ ನೋಂದಣಿ ಮಾಡಿಸಿಕೊಂಡಿದೆ. ವಿ. ಲವ ಎನ್ನುವವರು ಚಿತ್ರ ನಿರ್ದೇಶನ ಮಾಡಲಿದ್ದಾರೆ. ಪಾತ್ರಧಾರಿಗಳ ಆಯ್ಕೆ ಇನ್ನೂ ನಡೆದಿಲ್ಲ.