ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಐಪಿಎಲ್‌ನ 18ರ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಇಂದು ರಾತ್ರಿ 7.30ಕ್ಕೆ ಮುಖಾಮುಖಿಯಾಗಲಿದೆ.
ಪ್ಯಾಟ್ ಕಮಿನ್ಸ್ ನಾಯಕತ್ವದ ಸನ್‌ರೈಸರ್ಸ್ ತಂಡವು ಕೊನೆಯ ಪಂದ್ಯದಲ್ಲಿ ಗುಜರಾತ್ ವಿರುದ್ಧ ಸೋತಿತ್ತು. ಅತ್ತ ಋತುರಾಜ್ ಗಾಯಕವಾಡ್ ನಾಯಕತ್ವದ ಚೆನ್ನೈ ತಂಡವು ವಿಶಾಖಪಟ್ಟಣದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ದ ಮುಗ್ಗರಿಸಿತ್ತು. ಇದೀಗ ಉಭಯ ತಂಡಗಳು ಕೂಡಾ ಗೆಲುವಿನ ಲಯ ಕಂಡುಕೊಳ್ಳಲು ರೋಚಕ ಹಣಾಹಣಿಯಲ್ಲಿ ಎದುರಾಗಲಿವೆ.
ಕಳೆದ ಆವೃತ್ತಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಆಡಿರುವ ಮೂರು ಪಂದ್ಯಗಳ ಪೈಕಿ ಎರಡು ಪಂದ್ಯಗಳನ್ನು ಗೆದ್ದುಕೊಂಡಿದೆ. ಕಳೆದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತಿರುವ ತಂಡವು ಈ ಪಂದ್ಯದಲ್ಲಿ ಮತ್ತೆ ಗೆಲುವಿನ ಹಳಿಗೆ ಮರಳಲು ಪ್ರಯತ್ನ ನಡೆಸಲಿದೆ.
ಸನ್‌ರೈಸರ್ಸ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಆಡಿರುವ ಮೂರು ಪಂದ್ಯಗಳ ಪೈಕಿ ಒಂದರಲ್ಲಿ ಮಾತ್ರ ಗೆಲುವು ಸಾಧಿಸಿದೆ. ಕಳೆದ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ವಿರುದ್ಧ ಮುಗ್ಗರಿಸಿದ್ದ ತಂಡವು ಈ ಪಂದ್ಯದಲ್ಲಿ ರನ್ ಹೊಳೆ ಹರಿಸುವ ವಿಶ್ವಾಸದಲ್ಲಿದೆ.
ಸಂಭಾವ್ಯ ತಂಡಗಳು:
ಸನ್‌ರೈಸರ್ಸ್ ಹೈದರಾಬಾದ್: ಮಯಾಂಕ್ ಅಗರವಾಲ್, ಟ್ರಾವಿಸ್ ಹೆಡ್, ಅಭಿಷೇಕ್ ಶರ್ಮಾ, ಏಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್ ಕೀಪರ್), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಜಯದೇವ್ ಉನದ್ಕತ್ .
ಚೆನ್ನೈ ಸೂಪರ್ ಕಿಂಗ್ಸ್: ಋತುರಾಜ್ ಗಾಯಕವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮತೀಶ ಪತಿರಾಣ, ಮಹೀಶಾ ತೀಕ್ಷಾಣ.