ಹೈದರಾಬಾದ್: ಭಾರತದ ಬ್ಯಾಡ್ಮಿಂಟನ್ ಸ್ಟಾರ್‌ಗಳಾದ ಚಿರಾಗ್ ಶೆಟ್ಟಿ ಮತ್ತು ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ ಜೋಡಿಯು ವಿಶ್ವ ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ರ‍್ಯಾಂಕಿಂಗ್‌ನಲ್ಲಿ 10 ವಾರಗಳ ಕಾಲ ಅಗ್ರಸ್ಥಾನದಲ್ಲಿ ನೆಲೆಸಿದ್ದಾರೆ.
 
									
			
			 
 			
 
 			
					
			        							
								
																	ಈ ಮೂಲಕ ವಿಶ್ವ ಬ್ಯಾಡ್ಮಿಂಟನ್ ರ‍್ಯಾಂಕಿಂಗ್‌ನಲ್ಲಿ ಗರಿಷ್ಠ ವಾರಗಳ ಕಾಲ ಅಗ್ರಸ್ಥಾನ ಅಲಂಕರಿಸಿದ ಭಾರತೀಯ ಆಟಗಾರರೆನಿಸಿದ್ದಾರೆ. ಮಹಿಳಾ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ ಸೈನಾ ನೆಹ್ವಾಲ್ 9 ವಾರಗಳ ಕಾಲ ನಂ. 1 ಪಟ್ಟ ಅಲಂಕರಿಸಿದ್ದು, ಈ ಹಿಂದಿನ ದಾಖಲೆಯಾಗಿದೆ.
									
										
								
																	ಸೈನಾ ನೆಹ್ವಾಲ್ 2015ರ ಆಗಸ್ಟ್ 18ರಿಂದ ಅಕ್ಟೋಬರ್ 21ರವರೆಗೆ ವಿಶ್ವ ನಂ. 1 ಪಟ್ಟದಲ್ಲಿದ್ದರು. ನಂತರದಲ್ಲಿ ಪುರುಷರ ಸಿಂಗಲ್ಸ್ ರ‍್ಯಾಂಕಿಂಗ್‌ನಲ್ಲಿ ಕಿದಣಬಿ ಶ್ರೀಕಾಂತ್ 2018ರಲ್ಲಿ ಕೇವಲ ಒಂದು ವಾರ ಕಾಲ ನಂ. 1 ಪಟ್ಟದಲ್ಲಿ ನೆಲೆಸಿದ್ದರು. ಅದಕ್ಕೆ ಮುನ್ನ 1980ರಲ್ಲಿ ಕನ್ನಡಿಗ ಪ್ರಕಾಶ್ ಪಡುಕೋಣೆ ಕೂಡ ಕೆಲ ಕಾಲ ನಂ. 1 ಪಟ್ಟ ಅಲಂಕರಿಸಿದ್ದರು.
									
											
							                     
							
							
			        							
								
																	ಚಿರಾಗ್ ಮತ್ತು ಸಾತ್ವಿಕ್ ಜೋಡಿ ವಿಶ್ವ ನಂ. 1 ಪಟ್ಟದಲ್ಲಿ ಸದ್ಯಕ್ಕೆ 10 ವಾರಗಳನ್ನು ಪೂರೈಸಿದ್ದು, ಇನ್ನೂ ಕೆಲ ವಾರಗಳ ಕಾಲ ಇದನ್ನು ಕಾಯ್ದುಕೊಳ್ಳುವ ನಿರೀಕ್ಷೆ ಇದೆ. ಹಾಲಿ ವರ್ಷದ ಮೊದಲ 3 ಪ್ರಮುಖ ಟೂರ್ನಿಗಳಲ್ಲಿ ಅವರಿಬ್ಬರು ಫೈನಲ್ಗೇರಿದ್ದು, ಈ ಪೈಕಿ ಫ್ರೆಂಚ್ ಓಪನ್ ಸೂಪರ್-750 ಟೂರ್ನಿಯಲ್ಲಿ ಪ್ರಶಸ್ತಿ ಒಲಿಸಿಕೊಂಡಿದ್ದರು.