ಕೋಲ್ಕತಾ: ಕೋಲ್ಕತಾ ನೈಟ್ ರೈಡರ್ಸ್ ಎರಡು ಬಾರಿ ಐಪಿಎಲ್ ಚಾಂಪಿಯನ್ನರಾಗಿದ್ದು, ಎಡೆನ್‌ಗಾರ್ಡನ್ಸ್‌ನಲ್ಲಿ ಸನ್ ರೈಸರ್ಸ್ ವಿರುದ್ಧ ಎಲಿಮಿನೇಟರ್ ಪಂದ್ಯದ ಹೋರಾಟದಲ್ಲಿ ತಮ್ಮ ಬ್ಯಾಟಿಂಗ್ ಬಲಾಢ್ಯತೆಯನ್ನು ಪ್ರತಿಪಾದಿಸುವ ಗುರಿಯನ್ನು ಹೊಂದಿದ್ದರೆ, ಸನ್ ರೈಸರ್ಸ್ ಮನಸ್ಸಿನಲ್ಲಿ ಸೇಡನ್ನು ತೀರಿಸಿಕೊಳ್ಳಲು ಹಪಹಪಿಸಿದೆ. ಈ ಪಂದ್ಯದಲ್ಲಿ ಸೋತವರು ಎಲಿಮಿನೇಟ್ ಆಗುವುದರಿಂದ ಹಣಾಹಣಿ ಹೋರಾಟವನ್ನು ಎರಡೂ ತಂಡದಿಂದ ನಿರೀಕ್ಷಿಸಲಾಗಿದೆ.
ಎರಡೂ ತಂಡಗಳು ಲೀಗ್‌ನಲ್ಲಿ 16 ಪಾಯಿಂಟ್ ಗಳಿಸಿ ಸಮಸಮವಾಗಿದ್ದರೂ ರನ್ ರೇಟ್ ಕಡಿಮೆ ಇದ್ದಿದ್ದರಿಂದ ಗೌತಮ್ ಗಂಭೀರ್ ನೇತೃತ್ವದ ತಂಡ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಆದರೆ ಇಂದಿನ ಆಟದಲ್ಲಿ ಕೆಕೆಆರ್ ಸನ್ ರೈಸರ್ಸ್ ವಿರುದ್ಧ ಮಾನಸಿಕವಾಗಿ ಅನುಕೂಲ ಪಡೆದಿದ್ದು, ಲೀಗ್ ಹಂತದಲ್ಲಿ ಎರಡು ಬಾರಿ ಸನ್ ರೈಸರ್ಸ್ ತಂಡವನ್ನು ಸೋಲಿಸಿದೆ.
ದಾಖಲೆಗಳನ್ನು ನೋಡುವುದಾದರೆ, ಕೆಕೆಆರ್ 2012 ಮತ್ತು 2014ರಲ್ಲಿ 2 ಬಾರಿ ಚಾಂಪಿಯನ್ನರಾಗಿದ್ದು, 2011ರಲ್ಲಿ ಪ್ಲೇ ಆಫ್ ಪ್ರವೇಶ ಮಾಡಿತ್ತು. ಆದರೆ ಸನ್ ರೈಸರ್ಸ್ 2013ರಲ್ಲಿ ಮಾತ್ರ ಪ್ಲೇ ಆಫ್ ಪ್ರವೇಶ ಮಾಡಿತ್ತು. ಜಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಕಡೆಗಣಿಸಲಾದ ಕೋಲ್ಕತಾ ನಾಯಕ ಗಂಭೀರ್ ಆಯ್ಕೆದಾರರಿಗೆ ತಮ್ಮ ಸಾಮರ್ಥ್ಯ ಸಾಬೀತು ಮಾಡುವ ಹತಾಶೆಯ ಸ್ಥಿತಿಯಲ್ಲಿದ್ದು, 14 ಪಂದ್ಯಗಳಲ್ಲಿ 5 ಅರ್ಧಶತಕಗಳ ಮೂಲಕ ಕೆಕೆಆರ್ ಪ್ರಮುಖ ಸ್ಕೋರರ್ ಆಗಿದ್ದಾರೆ. ರಾಬಿನ್ ಉತ್ತಪ್ಪ ಮತ್ತು ಯುಸುಫ್ ಪಠಾಣ್ ಅವರನ್ನು ಕೂಡ ರಾಷ್ಟ್ರೀಯ ತಂಡ ಕಡೆಗಣಿಸಿದೆ.
ಆದರೆ ಕೆಕೆಆರ್ ಯುವ ಬ್ಯಾಟ್ಸ್‌ಮನ್ ಮನೀಶ್ ಪಾಂಡೆಯನ್ನು ಜಿಂಬಾಬ್ವೆ ಪ್ರವಾಸಕ್ಕೆ ಆಯ್ಕೆ ಮಾಡಲಾಗಿದ್ದು, ಅವರು 11 ಪಂದ್ಯಗಳಿಂದ 212 ರನ್ ಸ್ಕೋರ್ ಮಾಡಿದ್ದಾರೆ. ಕೆಕೆಆರ್ ಪರ ಸುನಿಲ್ ನಾರಾಯಣ್ ಮತ್ತು ಕುಲದೀಪ್ ಯಾದವ್ ಸನ್ ರೈಸರ್ಸ್ ವಿರುದ್ಧ ಕ್ರಮವಾಗಿ 3 ಮತ್ತು ಎರಡು ವಿಕೆಟ್ ಕಬಳಿಸಿ ಗೆಲುವು ದಕ್ಕಿಸಿಕೊಟ್ಟಿದ್ದಾರೆ.
ಗಂಭೀರ್ ರೀತಿಯಲ್ಲಿ ನಾಯಕ ಡೇವಿಡ್ ವಾರ್ನರ್ ಕೂಡ ಸನ್ ರೈಸರ್ಸ್‌ಗೆ ಸ್ಫೂರ್ತಿ ತುಂಬಿದ್ದಾರೆ. 14 ಪಂದ್ಯಗಳಲ್ಲಿ 658 ರನ್ ಸ್ಕೋರ್ ಮಾಡಿ ಎರಡನೇ ಅತ್ಯಧಿಕ ರನ್ ಸ್ಕೋರರ್ ಎನಿಸಿದ್ದಾರೆ. ಶಿಖರ್ ಧವನ್ ಕೂಡ ಅಜೇಯ 82 ರನ್‌ಗಳೊಂದಿಗೆ ಒಟ್ಟು 463 ರನ್ ಸ್ಕೋರ್ ಮಾಡಿದ್ದಾರೆ. ನೆಹ್ರಾ ಗಾಯಗೊಂಡಿದ್ದು ಅವರ ಅನುಪಸ್ಥಿತಿಯಲ್ಲಿ ಬರೀಂದರ್ ಸ್ರಾನ್ ಮತ್ತು ಮುಸ್ತಫಿಜುರ್ ರೆಹ್ಮಾನ್ ಮತ್ತು ಭುವನೇಶ್ವರ್ ಕುಮಾರ್ ಬೌಲಿಂಗ್ ಶಕ್ತಿಯನ್ನು ಸನ್ ರೈಸರ್ಸ್ ಅವಲಂಬಿಸಿದೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.