ದುಬೈ: ಐಪಿಎಲ್ 14 ರ ಎರಡನೇ ಭಾಗ ಆರಂಭವಾಗಲು ಇನ್ನೇನು ಕೆಲವೇ ದಿನ ಬಾಕಿಯಿದೆ. ಅದಕ್ಕೂ ಮೊದಲು ಮೊದಲ ಭಾಗದಲ್ಲಿ ಗರಿಷ್ಠ ರನ್ ಸಂಪಾದಿಸಿದವರು ಯಾರು, ಗರಿಷ್ಠ ವಿಕೆಟ್ ಪಡೆದವರು ಯಾರು ಎಂದು ನೋಡೋಣ.
ಭಾರತದಲ್ಲಿಯೇ ನಡೆದ ಐಪಿಎಲ್ 14 ರ ಮೊದಲ ಭಾಗದಲ್ಲಿ ಉತ್ಕೃಷ್ಠ ಬ್ಯಾಟಿಂಗ್ ಪ್ರದರ್ಶಿಸಿದವರು ಶಿಖರ್ ಧವನ್ ಮತ್ತು ಕೆಎಲ್ ರಾಹುಲ್. ಈ ಪೈಕಿ 8 ಪಂದ್ಯಗಳನ್ನಾಡಿದ ಧವನ್ 380 ರನ್ ಸಂಪಾದಿಸಿದ್ದರು. ರಾಹುಲ್ 7 ಪಂದ್ಯಗಳಿಂದ 331 ರನ್ ಗಳಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು, ಸಿಎಸ್ ಕೆ ಬ್ಯಾಟ್ಸ್ ಮನ್ ಫಾ ಡು ಪ್ಲೆಸಿಸ್ 7 ಪಂದ್ಯಗಳಿಂದ 320 ರನ್ ಗಳಿಸಿ ಇವರ ಬೆನ್ನ ಹಿಂದೆಯೇ ಇದ್ದಾರೆ.
ಇನ್ನು, ಬೌಲಿಂಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಬೌಲರ್ ಹರ್ಷಲ್ ಪಟೇಲ್ ಅಗ್ರ ಸ್ಥಾನದಲ್ಲಿದ್ದಾರೆ. ಒಟ್ಟು 7 ಪಂದ್ಯಗಳಿಂದ 17 ವಿಕೆಟ್ ಕಬಳಿಸಿದ್ದಾರೆ. 8 ಪಂದ್ಯಗಳಿಂದ 14 ವಿಕೆಟ್ ಗಳಿಸಿದ ಆವೇಶ್ ಖಾನ್ ಎರಡನೇ ಸ್ಥಾನದಲ್ಲಿದ್ದಾರೆ. ಕ್ರಿಸ್ ಮೋರಿಸ್ 7 ಪಂದ್ಯಗಳಿಂದ 14 ವಿಕೆಟ್ ಗಳಿಸಿ ಎರಡನೇ ಸ್ಥಾನ ಹಂಚಿಕೊಂಡಿದ್ದಾರೆ.