ಮುಂಬೈ: ಟೀಂ ಇಂಡಿಯಾ ಕಂಡ ಅತ್ಯಂತ ಶ್ರೇಷ್ಠ ಕೋಚ್ ಗ್ಯಾರಿ ಕರ್ಸ್ಟನ್. ರವಿಶಾಸ್ತ್ರಿ ನಿರ್ಗಮನದ ಬಳಿಕ ಮತ್ತೆ ಗ್ಯಾರಿ ಟೀಂ ಇಂಡಿಯಾ ಕೋಚ್ ಆಗುತ್ತಾರಾ? ಈ ಪ್ರಶ್ನೆಗೆ ಅವರೇ ಉತ್ತರಿಸಿದ್ದಾರೆ.
ಅಕ್ಟೋಬರ್ ಬಳಿಕ ರವಿಶಾಸ್ತ್ರಿ ಕೋಚ್ ಹುದ್ದೆಯಿಂದ ನಿರ್ಗಮಿಸಲಿದ್ದಾರೆ ಎನ್ನಲಾಗಿದೆ. ಅದಾದ ಬಳಿಕ ಕೊಹ್ಲಿ ಹಾಗೂ ಟೀಂ ಇಂಡಿಯಾ ಜೊತೆಗೆ ಉತ್ತಮ ಬಾಂಧವ್ಯವಿರುವ ವ್ಯಕ್ತಿಯನ್ನೇ ಕೋಚ್ ಆಗಿ ನೇಮಕ ಮಾಡಲು ಬಿಸಿಸಿಐ ಚಿಂತನೆ ನಡೆಸಿದೆ.
ದ.ಆಫ್ರಿಕಾ ಮಾಜಿ ಕ್ರಿಕೆಟಿಗ ಕರ್ಸ್ಟನ್ ಟೀಂ ಇಂಡಿಯಾ ಕೋಚ್ ಆಗಿದ್ದಾಗ ಎಲ್ಲರೊಂದಿಗೆ ಹೊಂದಾಣಿಕೆಯಿಂದಿದ್ದರು. ಹೀಗಾಗಿ ಅವರನ್ನೇ ಮತ್ತೊಮ್ಮೆ ಕೋಚ್ ಆಗಿ ನೇಮಕ ಮಾಡಬಹುದೇ ಎಂಬ ಅನುಮಾನಗಳಿಗೆ ಅವರೇ ಸ್ಪಷ್ಟನೆ ನೀಡಿದ್ದಾರೆ. ನನಗೆ ಮತ್ತೆ ಟೀಂ ಇಂಡಿಯಾ ಕೋಚ್ ಆಗುವ ಇರಾದೆ ಇಲ್ಲ. ಸದ್ಯಕ್ಕೆ ಕೋಚಿಂಗ್ ಕುರಿತು ಉದ್ಯಮವೊಂದರಲ್ಲಿ ತೊಡಗಿಸಿಕೊಂಡಿದ್ದೇನೆ ಎಂದಿದ್ದಾರೆ.