ದುಬೈ: ಟಿ20 ಕ್ರಿಕೆಟ್ ಎಂದರೆ ರೋಚಕತೆಗೆ ಮತ್ತೊಂದು ಹೆಸರು. ಕೊನೆಯ ಓವರ್, ಕೊನೆಯ ಬಾಲ್ ನ ಟೆನ್ಷನ್ ಪ್ರೇಕ್ಷಕರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ. ಈ ವಿಚಾರದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಹೊಸ ದಾಖಲೆಯನ್ನೇ ಬರೆದಿದೆ.
ನಿನ್ನೆ ಕೋಲ್ಕೊತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯವನ್ನು ಕೊನೆಯ ಎಸೆತದಲ್ಲಿ ರೋಚಕವಾಗಿ 2 ವಿಕೆಟ್ ಗಳಿಂದ ಗೆದ್ದ ಚೆನ್ನೈ ಹೊಸ ದಾಖಲೆ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಚೆನ್ನೈ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 172 ರನ್ ಗಳಿಸುವ ಮೂಲಕ ರೋಚಕ ಗೆಲುವು ಕಂಡಿತು. ರವೀಂದ್ರ ಜಡೇಜಾ ಕೊನೆಯಲ್ಲಿ 8 ಎಸೆತಗಳಿಂದ 22 ರನ್ ಗಳಿಸಿದ್ದು ಪಂದ್ಯದ ತಿರುವಾಗಿತ್ತು.
ಈ ಮೂಲಕ ಕೊನೆಯ ಎಸೆತದಲ್ಲಿ ಐಪಿಎಲ್ ನಲ್ಲಿ ಅತೀ ಹೆಚ್ಚು ಗೆಲುವು ಕಂಡ ತಂಡ ಎಂಬ ಹೆಗ್ಗಳಿಕೆ ಸಿಎಸ್ ಕೆಯದ್ದಾಯ್ತು. ಧೋನಿ ಪಡೆ ಒಟ್ಟು ಆರು ಬಾರಿ ಈ ಸಾಧನೆ ಮಾಡಿದೆ. ಕೊನೆಯ ಓವರ್ ನ ಒತ್ತಡ ನಿಭಾಯಿಸುವುದರಲ್ಲಿ ಕ್ಯಾಪ್ಟನ್ ಧೋನಿ ಎತ್ತಿದ ಕೈ. ಹೀಗಾಗಿಯೇ ಅವರ ತಂಡವೂ ಈ ನಿಟ್ಟಿನಲ್ಲಿ ದಾಖಲೆಯನ್ನೇ ಮಾಡಿದೆ.