ಜೆಡ್ಡಾ: 2025ರ ಐಪಿಎಲ್ ಆವೃತ್ತಿಯ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ಇಂದು ಮಧ್ಯಾಹ್ನ ಪ್ರಾರಂಭಗೊಳ್ಳಲಿದೆ. ಸೌದಿ ಅರೇಬಿಯಾದ ಜೆಡ್ಡಾ ಮತ್ತು ಅಬಾಡಿ ಅಲ್-ಜೋಹರ್ ಅರೆನಾದಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ.
ಒಂದು ಫ್ರಾಂಚೈಸಿ ಗರಿಷ್ಠ 25 ಆಟಗಾರರನ್ನು ಒಳಗೊಳ್ಳಬಹುದಾಗಿದ್ದು, ಒಟ್ಟು 577 ಆಟಗಾರರು ಬಿಡ್ ಕಣದಲ್ಲಿದ್ದಾರೆ. 10 ಐಪಿಎಲ್ ತಂಡಗಳು ಒಟ್ಟು ₹ 641.5 ಕೋಟಿ ಹಣವನ್ನು ಹರಾಜಿನಲ್ಲಿ ವಿನಿಯೋಗಿಸಲಿದೆ.
ಸುಮಾರು 204 ಮಂದಿ ಆಟಗಾರರು ಆಯ್ಕೆಯಾಗುವ ಸಾಧ್ಯತೆ ಇದೆ. ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗಳಾದ ರಿಷಬ್ ಪಂತ್, ಕನ್ನಡಿಗ ಕೆ.ಎಲ್ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ ಹೆಚ್ಚಿನ ಮೊತ್ತಕ್ಕೆ ಖರೀದಿಸಲ್ಪಡುವ ಆಟಗಾರರ ಪೈಕಿ ಮುಂಚೂಣಿಯಲ್ಲಿ ಇದ್ದಾರೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಕರ್ನಾಟಕದ 24 ಆಟಗಾರರು ಅದೃಷ್ಟ ಪರೀಕ್ಷೆಗಿಳಿದಿದ್ದಾರೆ. ಕೆ.ಎಲ್ ರಾಹುಲ್, ದೇವದತ್ ಪಡಿಕ್ಕಲ್, ಮನೀಶ್ ಪಾಂಡೆ, ಮಯಾಂಕ್ ಅಗರ್‌ವಾಲ್, ಪ್ರಸಿದ್ಧ ಕೃಷ್ಣ, ಲುತ್ ಸಿಸೋಡಿಯಾ, ಆರ್.ಸ್ಮರಣ್, ಎಲ್.ಆರ್ ಚೇತನ್, ಮನೋಜ್ ಭಾಂಡಗೆ, ಅಭಿಲಾಶ್ ಶೆಟ್ಟಿ, ವೈಶಾಖ್ ವಿಜಯ್ ಕುಮಾರ್, ಪ್ರವೀಣ್ ದುಬೆ, ಮನ್ವಂತ್ ಕುಮಾರ್, ಕೆ.ಗೌತಮ್, ಶ್ರೇಯಸ್ ಗೋಪಾಲ್, ಹಾರ್ದಿಕ್ ರಾಜ್, ಅಭಿನವ್ ಮಹೋಹರ್, ಬಿ.ಆರ್ ಶರತ್, ಕೃಷ್ಣನ್ ಶ್ರೀಜಿತ್, ವಿದ್ವತ್ ಕಾವೇರಪ್ಪ, ದೀಪಕ್ ದೇವಾಡಿಗ, ವಿದ್ಯಾಧರ್ ಪಾಟೀಲ್, ಶುಭಾಂಗ್ ಹೆಗಡೆ, ಸಮರ್ಥ್ ನಾಗರಾಜ್ ಹರಾಜು ಪಟ್ಟಿಯಲ್ಲಿದ್ದಾರೆ.
ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಪಂತ್ 25 ಕೋಟಿ ರೂ. ಪಡೆದ ಮೊದಲ ಭಾರತೀಯ ಆಟಗಾರ ಖ್ಯಾತಿಗೆ ಯಾರು ಪಾತ್ರರಾಗುತ್ತಾರೆ ಪಾತ್ರರಾಗುವರೇ ಎಂಬುದು ಕುತೂಹಲ ಮೂಡಿಸಿದೆ. ಕಳೆದ ಆವೃತ್ತಿಯಲ್ಲಿ ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 24.75 ಕೋಟಿ ರೂ.ಗೆ ಕೋಲ್ಕತ್ತಾ ನೈಟ್‌ರೈಡರ್ಸ್‌ಗೆ ಬಿಕರಿಯಾಗಿದ್ದರು, ಇದು ಈವರೆಗಿನ ದಾಖಲೆ ಬೆಲೆಯಾಗಿದೆ.