Publish Date: Sun, 24 Mar 2019 (08:54 IST)
Updated Date: Sun, 24 Mar 2019 (08:55 IST)
ಚೆನ್ನೈ: ಐಪಿಎಲ್ ಕೂಟದ ಉದ್ಘಾಟನಾ ಪಂದ್ಯದಲ್ಲೇ ವಿರಾಟ್ ಕೊಹ್ಲಿ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ವಿಕೆಟ್ ಗಳ ಸೋಲನುಭಿಸಿದೆ.
ಸೋಲಿನೊಂದಿಗೇ ಆರ್ ಸಿಬಿ ಅಭಿಯಾನ ಆರಂಭವಾಗಿದೆ. ಆದರೆ ಸೋಲಿನ ಬಳಿಕ ಪಿಚ್ ಗುಣಮಟ್ಟದ ಬಗ್ಗೆ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅದೇನೇ ಇದ್ದರೂ ಇಲ್ಲಿ ಧೋನಿ ಜಾಣ ನಾಯಕತ್ವದಿಂದಾಗಿಯೇ ಆರ್ ಸಿಬಿ ಬ್ಯಾಟಿಂಗ್ ವೈಫಲ್ಯ ಕಂಡಿತು ಎಂದರೆ ತಪ್ಪಾಗಲಾರದು. ಮೊದಲ 8 ಓವರ್ ಗಳಲ್ಲೇ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ರನ್ನು ಕಣಕ್ಕಿಳಿಸಿದ ಧೋನಿ ಯಶಸ್ಸು ಕಂಡರು. ಭಜಿ ನಾಲ್ಕು ಓವರ್ ಗಳ ಕೋಟಾದಲ್ಲಿ ಕೇವಲ 20 ರನ್ ಬಿಟ್ಟು ಕೊಟ್ಟು ನಾಯಕ ಕೊಹ್ಲಿ ಸೇರಿದಂತೆ ಪ್ರಮುಖ 3 ವಿಕೆಟ್ ಗಳನ್ನು ಬೇಟೆಯಾಡಿದ್ದರು.
ಇದುವೇ ಪಂದ್ಯದ ಟರ್ನಿಂಗ್ ಪಾಯಿಂಟ್ ಆಯಿತು. ಎಷ್ಟೋ ದಿನಗಳ ನಂತರ ಕಣಕ್ಕಿಳದ ಭಜಿ ಎದುರಾಳಿಗಳಿಗೆ ಸಿಂಹ ಸ್ವಪ್ನರಾದರು. ಆರ್ ಸಿಬಿ 70 ರನ್ ಗೆ ಆಲೌಟ್ ಆದಾಗಲೇ ಸೋಲು ಕಟ್ಟಿಟ್ಟ ಬುತ್ತಿಯಾಗಿತ್ತು. ಬಳಿಕ ಸಿಎಸ್ ಕೆ ಈ ಗುರಿಯನ್ನು ಕೇವಲ 3 ವಿಕೆಟ್ ಕಳೆದುಕೊಂಡು 17.4 ಓವರ್ ಗಳಲ್ಲೇ ಗುರಿ ಮುಟ್ಟಿ ಮೊದಲ ಗೆಲುವಿನ ಕೇಕೆ ಹಾಕಿತು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ