ವಾಷಿಂಗ್ಟನ್: ಇಸ್ರೇಲ್– ಹಮಾಸ್ ನಡುವೆ ಶಾಂತಿ ಒಪ್ಪಂದಕ್ಕೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಂಗಪ್ರವೇಶ ಮಾಡಿದ್ದಾರೆ. ಗಾಜಾದ ಭವಿಷ್ಯಕ್ಕಾಗಿ ಪ್ರಸ್ತಾವಿತ ಒಪ್ಪಂದಕ್ಕೆ ಬರಲು ಹವಾಸ್‌ಗೆ ಅವರು ಗಡುವು ವಿಧಿಸಿದ್ದಾರೆ.
ಅ.5ರಂದು ಸಂಜೆ 6 ಗಂಟೆಗೆ ಹಮಾಸ್ ಇಸ್ರೇಲ್ ಜೊತೆ ಒಪ್ಪಂದ ಮಾಡಿಕೊಳ್ಳಬೇಕು. ಇದು ಕೊನೆಯ ಅವಕಾಶ. ಒಪ್ಪಂದಕ್ಕೆ ಬಾರದಿದ್ದರೆ ಯಾರೂ ಹಿಂದೆಂದೂ ನೋಡಿರದ ರೀತಿಯಲ್ಲಿ ಹಮಾಸ್‌ಗೆ ನರಕ ದರ್ಶನವಾಗಲಿದೆ ಎಂದು ವಾರ್ನಿಂಗ್ ನೀಡಿದ್ದಾರೆ..
ಗಾಜಾದಲ್ಲಿ ಯುದ್ಧವನ್ನು ಕೊನೆಗೊಳಿಸಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಸ್ತಾಪಿಸಿರುವ 20 ಅಂಶಗಳ ಯೋಜನೆಯನ್ನು ಒಪ್ಪಿಕೊಳ್ಳಲು ಹಮಾಸ್‌ಗೆ ಮೂರರಿಂದ ನಾಲ್ಕು ದಿನಗಳ ಕಾಲಾವಕಾಶ ನೀಡುವುದಾಗಿ ಟ್ರಂಪ್ ಮಂಗಳವಾರ ಹೇಳಿದ್ದರು. ಹಮಾಸ್ ಈ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದೆ ಎಂದು ಗುಂಪಿನ ಆಪ್ತ ಮೂಲಗಳು ಬುಧವಾರ ತಿಳಿಸಿತ್ತು.
ಗಾಜಾದಲ್ಲಿನ ಯುದ್ಧವನ್ನು ತಕ್ಷಣವೇ ಕೊನೆಗೊಳಿಸುವುದು ಮತ್ತು ಹಮಾಸ್ ಹಿಡಿತದಲ್ಲಿರುವ ಎಲ್ಲ ಒತ್ತೆಯಾಳುಗಳನ್ನು 72 ಗಂಟೆ ಒಳಗಾಗಿ ಬಿಡುಗಡೆ ಮಾಡುವುದನ್ನು ಈ ಶಾಂತಿ ಒಪ್ಪಂದದಲ್ಲಿ ಪ್ರಸ್ತಾಪಿಸಲಾಗಿದೆ.