ವಾಷಿಂಗ್ಟನ್: ಉಕ್ರೇನ್ ಮತ್ತು ರಷ್ಯಾ ನಡುವೆ ಶಾಂತಿ ಮಾತುಕತೆಗೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಪ್ರಯತ್ನದ ಬೆನ್ನಲ್ಲೇ ಭಾನುವಾರ ಉಕ್ರೇನ್ ವಿರುದ್ಧ ರಷ್ಯಾ ಮಾರಣಾಂತಿಕ ಡ್ರೋನ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಕನಿಷ್ಠ 13 ಮಂದಿ ಮೃತಪಟ್ಟಿದ್ದಾರೆ.
ಇದರಿಂದ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ವಿರುದ್ಧ ಕೆರಳಿ ಕೆಂಡವಾಗಿದ್ದಾರೆ. ಪುಟಿನ್ ಜೊತೆಗೆ ಯಾವಾಗಲೂ ಉತ್ತಮ ಸಂಬಂಧ ಹೊಂದಿದ್ದೇನೆ. ಆದರೆ ಅವರಿಗೆ ಏನೋ ಆಗಿದೆ. ಅವರು ಸಂಪೂರ್ಣವಾಗಿ ಹುಚ್ಚರಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದಾರೆ.
ಉಕ್ರೇನ್‌ನ ಎಲ್ಲಾ ಭಾಗಗಳನ್ನು ಅವರು ಬಯಸುತ್ತಾರೆ ಎಂದು ನಾನು ಯಾವಾಗಲೂ ಹೇಳಿದ್ದೇನೆ, ಬಹುಶಃ ಅದು ಸರಿ ಎಂದು ಸಾಬೀತಾಗಿದೆ. ಆದರೆ ಪುಟಿನ್ ಹಾಗೆ ಮಾಡಿದರೆ, ಅದು ರಷ್ಯಾದ ಅವನತಿಗೆ ಕಾರಣವಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಪುಟಿನ್ ವಿರುದ್ಧ ಆಗಾಗ್ಗೆ ಮೆಚ್ಚುಗೆಯ ಮಾತುಗಳನ್ನಾಡುವ ಟ್ರಂಪ್ ಈಗ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಉಕ್ರೇನ್ ಜೊತೆಗಿನ ಕದನ ವಿರಾಮ ಮಾತುಕತೆಗಳಲ್ಲಿ ರಷ್ಯಾದ ಬಗ್ಗೆ ಹೆಚ್ಚುತ್ತಿರುವ ಹತಾಶೆಯನ್ನು ವ್ಯಕ್ತಪಡಿಸಿದ್ದಾರೆ.