ವಾಷಿಂಗ್ಟನ್: ಶಾಂತಿ ನೋಬೆಲ್ ಪ್ರಶಸ್ತಿಗಾಗಿ ಸದಾ ಹಂಬಲಿಸುತ್ತಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೊನೆಗೂ ಶಾಂತಿ ಪ್ರಶಸ್ತಿ ಸಿಕ್ಕಿದೆ. ಆದರೆ, ಇದು ನೋಬೆಲ್ ಶಾಂತಿ ಗೌರವ ಅಲ್ಲ, ಚೊಚ್ಚಲ ಫಿಫಾ ಶಾಂತಿ ಪ್ರಶಸ್ತಿಯು ಟ್ರಂಪ್‌ಗೆ ಒಲಿದಿದೆ.
ಶುಕ್ರವಾರ ವಾಷಿಂಗ್ಟನ್ ಡಿ.ಸಿ. ಕೆನಡಿ ಸೆಂಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಫಿಫಾ ಅಧ್ಯಕ್ಷ ಗಿಯಾನಿ ಇನ್ಫಾಂಟಿನೊ ಅವರು ಟ್ರಂಪ್ ಅವರಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಬಳಿಕ ಪ್ರತಿಕ್ರಿಯಿಸಿದ ಟ್ರಂಪ್, ಇದು ನಿಜಕ್ಕೂ ನನ್ನ ಜೀವನದ ಶ್ರೇಷ್ಠ ಗೌರವ. ಪ್ರಶಸ್ತಿಗಿಂತಲೂ ಮುಖ್ಯವಾಗಿ ನಾವು ಲಕ್ಷಾಂತರ ಜೀವಗಳನ್ನು ಉಳಿಸಿದ್ದೇವೆ. ಇದಕ್ಕೆ ಕಾಂಗೋ ಉದಾಹರಣೆಯಾಗಿದೆ. ಅಲ್ಲದೆ, ಭಾರತ, ಪಾಕಿಸ್ತಾನ ನಡುವಿನ ಯುದ್ಧವನ್ನು ನಿಲ್ಲಿಸಿದ್ದೇನೆ ಎಂದು ಪುನರುಚ್ಚರಿಸಿದರು.
ಪ್ರಶಸ್ತಿ ಪ್ರಧಾನಕ್ಕೂ ಮೊದಲು ಡೊನಾಲ್ಡ್ ಟ್ರಂಪ್ ಅವರು ವಿಶ್ವದ ಇತರ ನಾಯಕರ ಜೊತೆಗೆ ಮಾತನಾಡುತ್ತಿರುವ ಮತ್ತು ರಾಜತಾಂತ್ರಿಕ ಸಾಧನೆಯನ್ನು ಬಣ್ಣಿಸುವ ವಿಡಿಯೋವನ್ನು ಪ್ರಸಾರ ಮಾಡಲಾಯಿತು. ವಿಡಿಯೋ ಆರಂಭದಲ್ಲಿ ಮೋದಿ ಮತ್ತು ಟ್ರಂಪ್ ನಡೆದುಕೊಂಡು ಹೋಗುತ್ತಿರುವ ದೃಶ್ಯವನ್ನು ತೋರಿಸಲಾಯಿತು.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ಯುರೋಪ್, ಅರಬ್ ನಾಯಕರ ಜೊತೆ ಟ್ರಂಪ್ ಮಾತನಾಡುತ್ತಿರುವುದು, ಬೇರೆ ದೇಶಗಳ ನಾಯಕರನ್ನು ಕೂರಿಸಿ ಶಾಂತಿ ಮಾತುಕತೆ ನಡೆಸುತ್ತಿರುವ ತುಣುಕನ್ನು ಪ್ರದರ್ಶಿಸಲಾಯಿತು.