ಮಾಸ್ಕೋ : ಉಕ್ರೇನ್ ರಾಜ್ಯತ್ವ(ಸ್ಟೇಟ್ಹುಡ್) ಅಪಾಯದಲ್ಲಿದೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ನೇರವಾದ ಎಚ್ಚರಿಕೆ ನೀಡಿದ್ದಾರೆ.
ಉಕ್ರೇನ್ ದೇಶದವರು ಈಗ ಏನು ಮಾಡುತ್ತಿದ್ದಾರೋ ಅದನ್ನು ಮುಂದುವರಿಸಿದರೆ ದೇಶವಾಗಿ ಉಳಿಯವುದು ಅನುಮಾನ. ಹಾಗೆ ಏನಾದರೂ ಆದರೆ ಉಕ್ರೇನಿಗರೇ ಕಾರಣ ಎಂದು ಪುಟಿನ್ ಹೇಳಿಕೆ ನೀಡಿದ್ದಾರೆ.
ಈ ಮೊದಲು ಈಗಿರುವ ಉಕ್ರೇನ್ ಸರ್ಕಾರವನ್ನು ಪತನಗೊಳಿಸಿ ತನ್ನ ಕೈಗೊಂಬೆ ವ್ಯಕ್ತಿಯನ್ನು ನೇಮಿಸುವ ಮೂಲಕ ಹೊಸ ಸರ್ಕಾರ ಸ್ಥಾಪನೆಗೆ ಪುಟಿನ್ ಮುಂದಾಗಿದ್ದಾರೆ ಎನ್ನಲಾಗುತ್ತಿತ್ತು.
ಆದರೆ ಈ ಹೊಸ ಹೇಳಿಕೆಯಿಂದ ಉಕ್ರೇನ್ ದೇಶವನ್ನೇ ಪುಟಿನ್ ಸಂಪೂರ್ಣವಾಗಿ ಕೈವಶ ಮಾಡುವ ಭೀತಿ ಎದುರಾಗಿದೆ.
ಈಗಾಗಲೇ ಶಸ್ತ್ರಾಸ್ತ್ರ ಗೋದಾಮುಗಳು, ಯುದ್ಧಸಾಮಗ್ರಿ ಡಿಪೋಗಳು, ವಾಯುಯಾನ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳು ಸೇರಿದಂತೆ ಉಕ್ರೇನ್ನ ಪ್ರಮುಖ ಮಿಲಿಟರಿ ಮೂಲಸೌಕರ್ಯವನ್ನು ನಾಶಪಡಿಸುವ ಕಾರ್ಯಾಚರಣೆಯನ್ನು ರಷ್ಯಾ ಪ್ರಾಯೋಗಿಕವಾಗಿ ಪೂರ್ಣಗೊಳಿಸಿದೆ ಎಂದು ಪುಟಿನ್ ಹೇಳಿದರು.
ಉಕ್ರೇನ್ ದೇಶದ ಈ ಸ್ಥಿತಿಗೆ ಅಲ್ಲಿನ ನಾಯಕತ್ವವೇ ಕಾರಣ. ಪಾಶ್ಚಾತ್ಯ ದೇಶಗಳು ನಿರ್ಬಂಧ ನಮ್ಮ ಮೇಲೆ ಯುದ್ಧ ಸಾರಿದಂತೆ. ರಷ್ಯಾದ ಪಡೆಗಳು ತಮಗೆ ನಿಯೋಜಿಸಲಾದ ಕಾರ್ಯಗಳನ್ನು ಪೂರೈಸುತ್ತವೆ ಮತ್ತು ಉಕ್ರೇನ್ನಲ್ಲಿ ಕಾರ್ಯಾಚರಣೆಯು ಯೋಜನೆ ಮತ್ತು ವೇಳಾಪಟ್ಟಿಗೆ ಅನುಗುಣವಾಗಿ ಮುಂದುವರಿಯುತ್ತದೆ ಎಂದು ಅವರು ತಿಳಿಸಿದರು.