ಟೋಕಿಯೊ: ದಿಢೀರ್ ಬೆಳವಣಿಗೆಯಲ್ಲಿ ಜಪಾನ್‌ನ ಪ್ರಧಾನಿ ಶಿಗೇರು ಇಶಿಬಾ ರಾಜೀನಾಮೆ ನೀಡಿದ್ದಾರೆ. ಆಡಳಿತಾರೂಢ ಲಿಬರಲ್ ಡೆಮಾಕ್ರಟಿಕ್ ಪಕ್ಷದ ವಿಭಜನೆಯನ್ನು ತಡೆಗಟ್ಟಲು ಶಿಗೇರು ಇಶಿಬಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.
ಜಪಾನ್ ಸಂಸತ್ತು ಚುನಾವಣೆಯಲ್ಲಿ ತಮ್ಮ ಪಕ್ಷವು ಭಾರಿ ಹಿನ್ನಡೆಯನ್ನು ಅನುಭವಿಸಿದ ಒಂದು ತಿಂಗಳ ನಂತರ, ಜಪಾನ್ ಪ್ರಧಾನಿ ಇಶಿಬಾ ಶಿಗೇರು ಇಂದು ಭಾನುವಾರ ತಮ್ಮ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿದ್ದಾರೆ.
ಕಳೆದ ಜುಲೈ ಆರಂಭದಲ್ಲಿ, ಜಪಾನ್ ಸಂಸತ್ತಿನ ಮೇಲ್ಮನೆಯಲ್ಲಿನ ಚುನಾವಣಾ ಸೋಲಿನ ನಂತರ ಇಶಿಬಾ ಅವರ ಒಕ್ಕೂಟವು ಬಹುಮತವನ್ನು ಪಡೆಯುವಲ್ಲಿ ವಿಫಲವಾದ ಕಾರಣ ಅವರು ದೊಡ್ಡ ಹಿನ್ನಡೆಯನ್ನು ಎದುರಿಸಿದ್ದರು.
ಕಳೆದ ವರ್ಷ ಅವರ ಪಕ್ಷವು ಸಂಸತ್ತಿನ ಕೆಳಮನೆಯಲ್ಲಿ ಬಹುಮತವನ್ನು ಪಡೆಯುವಲ್ಲಿ ವಿಫಲವಾಗಿತ್ತು. ಕ್ಯೋಡೋ ನ್ಯೂಸ್ ಪ್ರಕಾರ, ಜಪಾನ್ ಸಂಸತ್ತಿನ ಎರಡೂ ಸದನಗಳಲ್ಲಿ ಅವರ ಆಡಳಿತ ಒಕ್ಕೂಟವು ಬಹುಮತವನ್ನು ಕಳೆದುಕೊಂಡು ಪ್ರಮುಖ ಹಿನ್ನಡೆಯಾಗಿದ್ದರೂ, ರಾಜಕೀಯ ಅಸ್ತವ್ಯಸ್ತತೆಯನ್ನು ತಪ್ಪಿಸಲು ದೇಶದ ಪ್ರಧಾನ ಮಂತ್ರಿಯಾಗಿ ಅಧಿಕಾರದಲ್ಲಿಯೇ ಇರುವುದಾಗಿ ಇಶಿಬಾ ತಿಳಿಸಿದ್ದರು.