ಕಾಬುಲ್: ಅಫ್ಗಾನಿಸ್ತಾನ ಮತ್ತು ಪಾಕಿಸ್ತಾನದ ಗಡಿಯಲ್ಲಿ ಸಂಘರ್ಷ ಜೋರಾಗಿದ್ದು, ಇದೀಗ ಅಫ್ಗಾನಿಸ್ತಾನದ ಕಂದಹಾರ್ ಮೇಲೆ ಪಾಕಿಸ್ತಾನ ವಾಯುದಾಳಿ ನಡೆಸಿದ ದಾಳಿಯಲ್ಲಿ 40ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಪಾಕಿಸ್ತಾನ ಬುಧವಾರ ಅಫ್ಗಾನಿಸ್ತಾನದ ಕಂದಹಾರ್ ಪ್ರಾಂತ್ಯದಲ್ಲಿ ವಾಯುದಾಳಿ ನಡೆಸಿದೆ ಎಂದು ಅಫ್ಗಾನ್ ಮತ್ತು ಪಾಕಿಸ್ತಾನ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಇನ್ನೂ ಮಂಗಳವಾರ ಅಫ್ಗಾನ್ ಮತ್ತು ಪಾಕಿಸ್ತಾನ ಪಡೆಗಳ ನಡುವೆ ನಡೆದ ಘರ್ಷಣೆಯಲ್ಲಿ ಅಫ್ಗಾನಿಸ್ತಾನದಲ್ಲಿ 12ಕ್ಕೂ ಹೆಚ್ಚು ನಾಗರಿಕರು ಸಾವಿಗೀಡಾಗಿದ್ದರು. ಇನ್ನೂ ಅಫ್ಗಾನಿಸ್ತಾನದ ತಾಲೀಬಾನ್‌ಗಳು ನಡೆಸಿದ ಪ್ರತೀಕಾರದ ದಾಳಿಯಲ್ಲಿ 6 ಪಾಕ್ ಸೈನಿಕರು ಸಾವನ್ನಪ್ಪಿದ್ದಾರೆ ಎನ್ನಲಾಗಿತ್ತು. ಬುಧವಾರ ಮಧ್ಯಾಹ್ನದ ವರದಿ ಪ್ರಕಾರ ಪಾಕಿಸ್ತಾನಿ ಸೇನೆಯು ಕನಿಷ್ಠ 40 ಮಂದಿ ಅಫ್ಗಾನಿಸ್ತಾನದ ತಾಲಿಬಾನ್ ದಾಳಿಕೋರರನ್ನು ಕೊಂದಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದಲ್ಲಿ ದಾಳಿಗಳನ್ನು ಹೆಚ್ಚಿಸಿರುವ ಭಯೋತ್ಪಾದಕರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅಫ್ಗಾನಿಸ್ತಾನದ ತಾಲಿಬಾನ್ ಸರ್ಕಾರವನ್ನು ಪಾಕಿಸ್ತಾನ ಒತ್ತಾಯಿಸಿತ್ತು. ಅಫ್ಗಾನಿಸ್ತಾನದಿಂದಲೇ ಉಗ್ರರು ಕಾರ್ಯಾಚರಿಸುತ್ತಿದ್ದಾರೆ ಎಂದು ಪಾಕಿಸ್ತಾನ ಹೇಳಿತ್ತು. ಅದಾದ ಬಳಿಕ ಈ ಬೆಳವಣಿಗೆ ನಡೆದಿದೆ.