ಕಠ್ಮಂಡು: ಭಾರತದ ನೆರೆಯ ರಾಷ್ಟ್ರ ನೇಪಾಳದಲ್ಲಿ ಭೂಕಂಪನ ಸಂಭವಿಸಿದ್ದು ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆ ದಾಖಲಾಗಿದೆ. ಭೂಕಂಪನದಿಂದಾಗಿ ದೇವಾಲಯದ ಗಂಟೆ ಅಲ್ಲಾಡುತ್ತಿರುವ ವಿಡಿಯೋವೊಂದು ಈಗ ವೈರಲ್ ಆಗಿದೆ.
ಇಂದು ಬೆಳಿಗ್ಗೆ ಸುಮಾರು 6.30 ರ ವೇಳೆಗೆ ನೇಪಾಳದ ಚೀನಾ ಗಡಿ ಸಮೀಪದ ಪ್ರದೇಶಗಳಲ್ಲಿ ಭೂಕಂಪನವಾಗಿದೆ. ಲೊಬುಚೆಯಿಂದ ಸುಮಾರು 93 ಕಿ.ಮೀ. ಈಶಾನ್ಯ ಭಾಗದಲ್ಲಿ ಭೂಕಂಪನವಾಗಿದೆ. ಲಘುವಾಗಿ ಭೂಮಿ ಕಂಪಿಸಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಸೆರೆಯಾಗಿದೆ.
ಭೂಮಿ ಕಂಪಿಸಿದ ಅನುಭವವಾಗುತ್ತಿದ್ದಂತೇ ಜನ ದಿಕ್ಕಾಪಾಲಾಗಿ ಓಡುತ್ತಿರುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದರಲ್ಲೂ ಒಂದು ದೇವಾಲಯದಲ್ಲಿ ಭೂಕಂಪನದಿಂದಾಗಿ ಗಂಟೆ ತಾನಾಗಿಯೇ ಅಲ್ಲಾಡಿದ ದೃಶ್ಯ ಕಂಡುಬಂದಿದೆ.
ಭಾರತದ ಗಡಿ ದೇಶವಾಗಿರುವುದರಿಂದ ದೆಹಲಿ, ಪಶ್ಚಿಮ ಬಂಗಾಲ, ಬಿಹಾರದಲ್ಲೂ ಸಣ್ಣ ಮಟ್ಟಿಗೆ ಭೂಕಂಪನದ ಅನುಭವವಾಗಿದೆ ಎಂದು ವರದಿಯಾಗಿದೆ. ಅದೃಷ್ಟವಶಾತ್ ಎಲ್ಲಿಯೂ ಯಾವುದೇ ಸಾವು-ನೋವು ಸಂಭವಿಸಿಲ್ಲ. ನಮ್ಮ ದೇಶದ ವಿವಿದೆಡೆ ಭೂಮಿ ಕಂಪಿಸಿದ ಅನುಭವವಾಗಿದ್ದು ರಿಕ್ಟರ್ ಮಾಪಕದಲ್ಲಿ 6.0 ರಿಂದ 7.0 ತೀವ್ರತೆ ದಾಖಲಾಗಿದೆ. ದೆಹಲಿಯಲ್ಲಿ ಕಳೆದ ವರ್ಷವೂ ಭೂಕಂಪನದ ಅನುಭವವಾಗಿತ್ತು. ಇದು ಒಂದು ವರ್ಷದ ಅವಧಿಯಲ್ಲಿ ಎರಡನೇ ಬಾರಿಗೆ ಹೀಗಾಗುತ್ತಿದೆ.