ವಾಷಿಂಗ್ಟನ್: ಅಮೆರಿಕಾ ಅಧ್ಯಕ್ಷ ಜೋ ಬೈಡನ್ ದಂಪತಿಯು 2023 ರಲ್ಲಿ ವಿದೇಶಿ ನಾಯಕರಿಂದ ಪಡೆದ ಅಸಂಖ್ಯಾತ ಉಡುಗೊರೆಗಳಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ವಜ್ರದ ಗಿಫ್ಟ್ ಅತ್ಯಂತ ದುಬಾರಿಯಾದುದು ಎಂದು ಶ್ವೇತಭವನ ಅಧಿಕಾರಿಗಳು ತಿಳಿಸಿದ್ದಾರೆ.
ಈ ವಜ್ರದ ಮೌಲ್ಯವು ಸುಮಾರು ₹ 17 ಲಕ್ಷಕ್ಕೂ ಅಧಿಕವಾಗಿದ್ದು, ಬೈಡನ್ ಅಧಿಕಾರದಿಂದ ನಿರ್ಗಮಿಸಿದ ನಂತರ ಈ ವಜ್ರವನ್ನು ಅಮೆರಿಕ ರಾಷ್ಟ್ರೀಯ ದಾಖಲೆಗಳಿಗೆ ವರ್ಗಾಯಿಸಲಾಗುತ್ತದೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.
ಅಮೆರಿಕಾದ ವಿದೇಶಾಂಗ ಇಲಾಖೆ ಇತ್ತೀಚೆಗೆ ಪ್ರಕಟಿಸಿದ ವಾರ್ಷಿಕ ಲೆಕ್ಕಪತ್ರ ವರದಿಯ ಪ್ರಕಾರ, 7.5 ಕ್ಯಾರೆಟ್ ವಜ್ರವು 2023 ರಲ್ಲಿ ಅಮೆರಿಕಾದ ಅಧ್ಯಕ್ಷರ ಕುಟುಂಬವು ಉಡುಗೊರೆಯಾಗಿ ಪಡೆದಿರುವ ಅತ್ಯಂತ ದುಬಾರಿ ವಸ್ತುವಾಗಿದೆ.
ಫೆಡರಲ್ ಕಾನೂನುಗಳ ಪ್ರಕಾರ, ಕಾರ್ಯನಿರ್ವಾಹಕ ಶಾಖೆಯ ಅಧಿಕಾರಿಗಳು ವಿದೇಶಿ ನಾಯಕರು ಮತ್ತು ಸಹವರ್ತಿಗಳಿಂದ $480 ಕ್ಕಿಂತ ಹೆಚ್ಚಿನ ಅಂದಾಜು ಮೌಲ್ಯವನ್ನು ಹೊಂದಿರುವ ಉಡುಗೊರೆಗಳನ್ನು ಪಡೆದರೆ ಅದನ್ನು, ರಾಷ್ಟ್ರೀಯ ಸಂಗ್ರಹಾಲಯಕ್ಕೆ ನೀಡಬೇಕಾಗುತ್ತದೆ. ಹಾಗಾಗಿ, ಪ್ರಧಾನಿ ಮೋದಿ ಅವರು ನೀಡಿರುವ ವಜ್ರವನ್ನು ಅಧಿಕೃತ ಪ್ರದರ್ಶನಗಳಲ್ಲಿ ಇರಿಸಲಾಗುತ್ತದೆ.