ನವ ದೆಹಲಿ (ಅ 11) : ಪೂರ್ವ ಲಡಾಖ್ ವಲಯದಲ್ಲಿ ಭಾರತ ಮತ್ತು ಚೀನಾ ನಡುವಿನ ಗಡಿ ಬಿಕ್ಕಟ್ಟು ಸದ್ಯಕ್ಕೆ ಮುಗಿಯುವ ಯಾವುದೇ ಲಕ್ಷಣ ಕಾಣಿಸುತ್ತಿಲ್ಲ. ಚೀನಾ ಸೈನಿಕರು ಈ ಭಾಗದಲ್ಲಿ ಆಗಿಂದಾಗ್ಗೆ ಗಡಿ ಉಲ್ಲಂಘನೆ ನಡೆಸುತ್ತಲೇ ಇದ್ದಾರೆ.
ಕಳೆದ ವಾರ ಸಹ ಗಡಿ ಉಲ್ಲಂಘಿಸಿದ ಅನೇಕ ಚೀನಾ ಸೈನಿಕರನ್ನು ಭಾರತ ಸೇನೆ ವಶಕ್ಕೆ ಪಡೆದಿತ್ತು. ಹೀಗಾಗಿ ಭಾರತ ಮತ್ತು ಚೀನಾ ಮಿಲಿಟರಿ ಕಮಾಂಡರ್ಗಳ ಮಟ್ಟದಲ್ಲಿ ಸಮಸ್ಯೆ ಇತ್ಯರ್ಥಕ್ಕೆ ಸತತ ಮಾತುಕತೆ ನಡೆಯುತ್ತಲೇ ಇದೆ. ಭಾನುವಾರ ಸಹ ಮೊಲ್ಡೊದಲ್ಲಿ ಭಾರತ ಮತ್ತು ಚೀನಾ ನಡುವೆ ಹದಿಮೂರನೇ ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆಗಳು ಸುಮಾರು ಎಂಟೂವರೆ ಗಂಟೆಗಳ ಕಾಲ ನಡೆದಿದೆ. ಪೂರ್ವ ಲಡಾಖ್ ವಲಯದಲ್ಲಿ ಉಭಯ ದೇಶಗಳ ಸೇನೆಗಳ ನಡುವಿನ ಮಿಲಿಟರಿ ಬಿಕ್ಕಟ್ಟನ್ನು ಬಗೆಹರಿಸುವ ಸಲುವಾಗಿ ಈ ಸಭೆಯನ್ನು ನಡೆಸಲಾಗಿದೆ ಎಂದು ಸೇನಾ ಮೂಲಗಳನ್ನು ಉಲ್ಲೇಖಿಸಿ ANI ವರದಿ ಮಾಡಿದೆ.
ಭಾನುವಾರ ಸಂಜೆ 7 ಗಂಟೆಗೆ ಮಾತುಕತೆ ಮುಕ್ತಾಯವಾದ ಸಭೆಯಲ್ಲಿ ಪೂರ್ವ ಲಡಾಖ್ನಲ್ಲಿ ಎರಡೂ ದೇಶಗಳ ಘರ್ಷಣೆಗೆ ಕಾರಣವಾದ ಪ್ರದೇಶಗಳಲ್ಲಿ ಸೇನೆ ಹಿಂದೆ ಸರಿಯುವ ಬಗ್ಗೆ ಹಾಗೂ ಶಾಂತಿಯನ್ನು ಕಾಪಾಡುವ ಬಗ್ಗೆ ಉನ್ನತ ಮಟ್ಟದ ಮಿಲಿಟರಿ ಮಾತುಕತೆಗಳನ್ನು ನಡೆಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಪೂರ್ವ ಲಡಾಖ್ನ ನೈಜ ನಿಯಂತ್ರಣ ರೇಖೆಯ (ಎಲ್ಎಸಿ) ಚೀನಾದ ಬದಿಯ ಮೊಲ್ಡೊ ಗಡಿ ಬಿಂದುವಿನಲ್ಲಿ ಮಾತುಕತೆಗಳು ನಡೆದಿದೆ. ಸೇನಾ ಮುಖ್ಯಸ್ಥ ಜನರಲ್ ಎಂಎಂ ನರವನೆ ಅವರು ಈ ಹಿಂದೆ ಚೀನಿಯರು ತಮ್ಮ ಭಾಗದಲ್ಲಿ ಮೂಲಸೌಕರ್ಯಗಳನ್ನು ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಅದರ ಬೆನ್ನಿಗೆ ಎರಡೂ ದೇಶದ ಸೈನಿಕರ ನಡುವೆ ಆಗಿಂದಾಗ್ಗೆ ಘರ್ಷಣೆಗಳೂ ಈ ಭಾಗದಲ್ಲಿ ಸಾಮಾನ್ಯವಾಗಿತ್ತು.
ಗಡಿ ಭಾಗದಲ್ಲಿ ಚೀನಾ ಎರಡು ಭಾರಿ ದೇಶದೊಳಕ್ಕೆ ಅತಿಕ್ರಮಣ ಮಾಡಲು ಯತ್ನಿಸಿದೆ. ಒಮ್ಮೆ ಉತ್ತರಾಖಂಡದ ಬರಹೋತಿ ವಲಯದಲ್ಲಿ ಮತ್ತೊಮ್ಮೆ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನಲ್ಲಿ ಅತಿಕ್ರಮಣಕ್ಕೆ ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಭಾನುವಾರ 13 ಸುತ್ತಿನ ಮಾತುಕತೆ ನಡೆದಿದ್ದು, ಮತ್ತೆ ಇಂತಹ ಕ್ರಮಕ್ಕೆ ಮುಂದಾಗದಂತೆ ಭಾರತ ಸೇನೆ ಎಚ್ಚರಿಕೆ ನೀಡಿದೆ ಎನ್ನಲಾಗಿದೆ.
ಕಳೆದ ವಾರ ಅರುಣಾಚಲ ಪ್ರದೇಶದ ತವಾಂಗ್ ಸೆಕ್ಟರ್ನ ಯಾಂಗ್ಟ್ಸೆ ಬಳಿ ಭಾರತೀಯ ಮತ್ತು ಚೀನಾದ ಸೈನಿಕರು ಘರ್ಷಣೆಯಲ್ಲಿ ತೊಡಗಿದ್ದರು. ಸ್ಥಾಪಿತ ನಿಯಮಗಳ ಪ್ರಕಾರ ಎರಡು ಕಡೆಯ ಕಮಾಂಡರ್ಗಳ ನಡುವಿನ ಮಾತುಕತೆಯ ನಂತರ ಆ ಸಮಸ್ಯೆಯನ್ನು ಕೆಲವೇ ಗಂಟೆಗಳಲ್ಲಿ ಪರಿಹರಿಸಲಾಯಿತು ಎಂದು ತಿಳಿದುಬಂದಿದೆ.