ನವದೆಹಲಿ: ಒಂದೆಡೆ ಚೀನಾದಲ್ಲಿ ಶಾಂಘೈ ಶೃಂಗ ಸಭೆ ನೆಪದಲ್ಲಿ ಭಾರತದ ಪ್ರಧಾನಿ ಮೋದಿ, ರಷ್ಯಾ ಅಧ್ಯಕ್ಷ ಪುಟಿನ್, ಮತ್ತು ಚೀನಾ ಅಧ್ಯಕ್ಷ ಜಿನ್ ಪಿಂಗ್ ಜೊತೆಯಾಗಿದ್ದರೆ ಇತ್ತ ಹೊಟ್ಟೆ ಉರಿ ತಾಳಲಾರದೇ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದ ಮೇಲೆ ಕೆಂಡ ಕಾರಿದ್ದಾರೆ.
ಶಾಂಘೈ ಶೃಂಗಸಭೆಯಲ್ಲಿ ಜೊತೆಯಾಗಿ ಕಾಣಿಸಿಕೊಳ್ಳುವ ಮೂಲಕ ಚೀನಾ, ರಷ್ಯಾ, ಭಾರತದ ನಾಯಕರು ಜಗತ್ತಿಗೇ ಒಗ್ಗಟ್ಟು ಪ್ರದರ್ಶನ ಮಾಡಿದ್ದಾರೆ. ಇತ್ತ ಅಮೆರಿಕಾ ನಡೆಸುತ್ತಿರುವ ಸುಂಕದ ದಾಳಿಗೆ ಈ ನಾಯಕರು ಸೆಡ್ಡು ಹೊಡೆದಿದ್ದಾರೆ.
ಇದು ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರನ್ನು ಮತ್ತೆ ಕೆರಳಿಸಿದೆ. ಭಾರತದ ವಿರುದ್ಧ ಮತ್ತೆ ವಾಗ್ದಾಳಿ ನಡೆಸಿರುವ ಅವರು ಭಾರತದ ಜೊತೆಗಿನ ಸಂಬಂಧ ಏಕಪಕ್ಷೀಯ ವಿಪತ್ತು ಎಂದು ಜರೆದಿದ್ದಾರೆ. ಈ ಹಿಂದೆಲ್ಲಾ ಭಾರತ ನನ್ನ ಫ್ರೆಂಡು ಎನ್ನುತ್ತಿದ್ದ ಟ್ರಂಪ್ ಈಗ ಫುಲ್ ಉಲ್ಟಾ ಹೊಡೆದಿದ್ದಾರೆ. ಭಾರತವು ಅಮೆರಿಕಾದಿಂದ ಕಡಿಮೆ ವಸ್ತುಗಳನ್ನು ಆಮದು ಮಾಡಿಕೊಳ್ಳುತ್ತದೆ ಮತ್ತು ಅದಕ್ಕೆ ಹೆಚ್ಚು ಸುಂಕ ವಿಧಿಸುತ್ತದೆ. ಆದರೆ ಅಮೆರಿಕಾಗೆ ಹೆಚ್ಚು ವಸ್ತುಗಳನ್ನು ರಫ್ತು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ. ಇಷ್ಟೇ ಅಲ್ಲ, ಮುಂಬರುವ ದಿನಗಳಲ್ಲಿ ನಿಗದಿಯಾಗಿದ್ದ ಭಾರತ ಭೇಟಿಯನ್ನೂ ಟ್ರಂಪ್ ರದ್ದುಪಡಿಸಿದ್ದಾರೆ ಎನ್ನಲಾಗಿದೆ. ಟ್ರಂಪ್ ನಡೆ ನೋಡಿ ಜನ ಅಬ್ಬಾ.. ಈತ ಹೊಟ್ಟೆ ಕಿಚ್ಚನ ಮೊಟ್ಟೆ ಕೋಳಿ ಎನ್ನುತ್ತಿದ್ದಾರೆ.