ಪೇಶಾವರ: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ರಕ್ತದೋಕುಳಿ ಹರಿದಿದೆ. ಗುಪ್ತಚರ ಆಧಾರಿತ ಎನ್‌ಕೌಂಟರ್ ಕಾರ್ಯಾಚರಣೆಯಲ್ಲಿ ನಿಷೇಧಿತ ಟಿಟಿಪಿಯ 19 ಭಯೋತ್ಪಾದಕರು ಮತ್ತು 11 ಸೈನಿಕರು ಸಾವನ್ನಪ್ಪಿದ್ದಾರೆ.
ಮೃತರಲ್ಲಿ ಪಾಕಿಸ್ತಾನದ ಲೆಫ್ಟಿನೆಂಟ್ ಕರ್ನಲ್ ಮತ್ತು ಮೇಜರ್ ಸೇರಿದ್ದಾರೆ. ಅಫ್ಘಾನಿಸ್ತಾನದ ಗಡಿಯಲ್ಲಿರುವ ಪ್ರಾಂತ್ಯದ ಒರಾಕ್ಜೈ ಜಿಲ್ಲೆಯಲ್ಲಿ ಫಿಟ್ನಾ ಅಲ್-ಖವಾರಿಜ್‌ಗೆ ಸಂಬಂಧಿಸಿದ ಭಯೋತ್ಪಾದಕರು ಅಡಗಿರುವ ಮಾಹಿತಿ ಸಿಕ್ಕ ಬೆನ್ನಲ್ಲೆ ಅಕ್ಟೋಬರ್ 7-8 ರ ರಾತ್ರಿ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಯಿತು.
ಪಾಕ್ ಸೈನಿಕರು ಮತ್ತು ಭಯೋತ್ಪಾದಕರ ನಡುವಿನ ಭೀಕರ ಗುಂಡಿನ ಚಕಮಕಿಯ ಸಂದರ್ಭದಲ್ಲಿ 19 ಭಯೋತ್ಪಾದಕರು ಹತ್ಯೆಗೀಡಾಗಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಮತ್ತು ಮೇಜರ್ ಸೇರಿದಂತೆ 11 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಿಷೇಧಿತ ಟಿಟಿಪಿ 2022ರ ನವೆಂಬರ್‌ನಲ್ಲಿ ಸರ್ಕಾರದೊಂದಿಗೆ ಕದನ ವಿರಾಮವನ್ನು ಕೊನೆಗೊಳಿಸಿದ ನಂತರ ಭದ್ರತಾ ಪಡೆಗಳು, ಪೊಲೀಸರು ಮತ್ತು ಕಾನೂನು ಜಾರಿ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ವಿಶೇಷವಾಗಿ ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳಲ್ಲಿ ಭಯೋತ್ಪಾದಕ ದಾಳಿಗಳು ಹೆಚ್ಚಾಗಿವೆ.