ಬೆಂಗಳೂರು: ಗಟ್ಟಿಯಾದ ಆಹಾರ ಸೇವನೆ ಮಾಡಿದಾಗ ಅಥವಾ ಖಾರದ ಆಹಾರ ಸೇವನೆ ಮಾಡಿದಾಗ ನಮಗೆ ತಡೆಯಲಾಗದಷ್ಟು ಬಿಕ್ಕಳಿಕೆ ಬರುತ್ತದೆ. ಆದರೆ ಬಿಕ್ಕಳಿಕೆ ಬರಲು ಕಾರಣವೇನೆಂದು ನೀವು ಎಂದಾದರೂ ಯೋಚಿಸಿದ್ದೀರಾ.
ಹೊಟ್ಟೆ ತುಂಬಾ ಆಹಾರ ಸೇವನೆ, ಗಟ್ಟಿಯಾದ ಆಹಾರ ಸೇವನೆ, ಖಾರದ ಆಹಾರ ಸೇವನೆ, ವಾತಾವರಣದಲ್ಲಿ ದಿಡೀರ್ ಬದಲಾವಣೆ, ಭಾವನಾತ್ಮಕ ಒತ್ತಡ, ಕಾರ್ಬೋನೇಟೆಡ್ ಪಾನೀಯಗಳು ಇತ್ಯಾದಿಗಳಿಂದಾಗಿ ನಮಗೆ ಸಡನ್ ಆಗಿ ಬಿಕ್ಕಳಿಕೆ ಆರಂಭವಾಗಬಹುದು. ಇದಕ್ಕೆ ನಿಖರವಾದ ಕಾರಣವೇನೆಂದು ಇನ್ನೂ ತಿಳಿದುಬಂದಿಲ್ಲ.
ಆದರೆ ಶ್ವಾಸಕೋಶಗಳ ತಳದಲ್ಲಿರುವ ಸ್ನಾಯುವಿನ ಹಠಾತ್ ಸೆಳೆತವನ್ನು ಬಿಕ್ಕಳಿಕೆ ಎನ್ನಬಹುದು. ಇದು ಧ್ವನಿ ಹಗ್ಗಗಳ ಹಠಾತ್ ಮುಚ್ಚುವಿಕೆಯಿಂದ ಉಂಟಾಗುತ್ತದೆ. ಇದರಿಂದಾಗಿ ಹಿಕ್ ಎನ್ನುವ ಧ್ವನಿ ಉತ್ಪಾದಿಸುತ್ತದೆ. ಯಾವುದೇ ವಯಸ್ಕರಿಗೂ ಇದು ಬರಬಹುದು.
ಬಿಕ್ಕಳಿಕೆ ಸಾಮಾನ್ಯವಾಗಿ ಕೆಲವು ಕ್ಷಣಗಳವರೆಗೆ ಇದ್ದು ನಂತರ ಸರಿ ಹೋಗುತ್ತದೆ. ಒಂದು ವೇಳೆ ಹಲವು ಸಮಯದವರೆಗೆ ಬಿಕ್ಕಳಿಕೆ ಮುಂದುವರಿದರೆ ನೀವು ತಜ್ಞ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ. ಇದನ್ನು ಇಂಟ್ರಾಕ್ಟಬಲ್ ಬಿಕ್ಕಳಿಕೆ ಎಂದು ಕರೆಯುತ್ತಾರೆ.
ಬಿಕ್ಕಳಿಕೆ ಬಂದಾಗ ಸಾಮಾನ್ಯವಾಗಿ ಸುಮಾರು 10 ಸೆಕೆಂಡುಗಳ ಕಾಲ ಉಸಿರು ಬಿಗಿ ಹಿಡಿದು ಉಸಿರು ಬಿಡಬೇಕು. ಇಲ್ಲವೇ ತಣ್ಣನೆಯ ನೀರು ಕುಡಿಯಬಹುದು. ಅಥವಾ ಸಡನ್ ಆಗಿ ಹೆದರಿಕೆ ಹುಟ್ಟುವ ಅಥವಾ ಆಘಾತ ಅನುಭವಿಸುವ ಸನ್ನಿವೇಶಕ್ಕೆ ಎದುರಾಗಿ. ಅಥವಾ ನೀರಿನಿಂದ ಗಾರ್ಗಲ್ ಮಾಡುವುದರಿಂದಲೂ ತಕ್ಕಮಟ್ಟಿಗೆ ಪರಿಹಾರ ಸಿಗಬಹುದು.