Publish Date: Tue, 13 Feb 2024 (09:44 IST)
Updated Date: Tue, 13 Feb 2024 (09:47 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಬಹುತೇಕರು ವಿಟಮಿನ್ ಡಿ ಕೊರತೆಯಿಂದ ಸಂಧು, ಮೈ ಕೈ ನೋವು ಸೇರಿದಂತೆ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ.
ಅದರಲ್ಲೂ ವಿಶೇಷವಾಗಿ ಬೆಂಗಳೂರಿಗರು ವಿಟಮಿನ್ ಡಿ ಕೊರತೆಯಿಂದ ಬಳಲುತ್ತಿರುವುದು ಸಾಕಷ್ಟು ಪ್ರಮಾಣದಲ್ಲಿ ಹೆಚ್ಚಾಗಿದೆ ಎಂದು ದಯಾನಂದ ಸಾಗರ ವಿವಿಯ ಮೂಳೆತಜ್ಞ ಡಾ. ಅವಿನಾಶ್ ಸಿ.ಕೆ. ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಕಾರಣವೇನು ಎಂಬುದರ ಬಗ್ಗೆ ನೋಡೋಣ.
ವಿಟಮಿನ್ ಡಿ ಕೊರತೆಯ ಲಕ್ಷಣಗಳು
ದೇಹದಲ್ಲಿ ಮೂಳೆಗಳು ಸದೃಢವಾಗಿ ಆರೋಗ್ಯವಾಗಿರಲು ವಿಟಮಿನ್ ಡಿ ಸಾಕಷ್ಟು ಪ್ರಮಾಣದಲ್ಲಿ ಇರಲೇಬೇಕು. ಇಲ್ಲದೇ ಹೋದರೆ ಅಕಾಲಿಕ ವಯಸ್ಸಿನಲ್ಲಿ ಸಂಧು ನೋವು, ಬೇಗನೇ ಸುಸ್ತಾಗುವುದು, ಮೂಳೆಗಳು ದುರ್ಬಲವಾಗುವುದು ಇತ್ಯಾದಿ ಸಮಸ್ಯೆ ಎದುರಿಸಬೇಕಾಗುತ್ತದೆ.
ಇದಕ್ಕಾಗಿ ಮುಂಜಾನೆ ಅಥವಾ ಮುಸ್ಸಂಜೆಯ ಎಳೆ ಬಿಸಿಲಿಗೆ ಮೈ ಒಡ್ಡಿ ನಿಲ್ಲುವುದು ಅವಶ್ಯಕ. ವಿಟಮಿನ್ ಡಿ ಅಂಶ ಹೇರಳವಾಗಿ ಸಿಗುವುದು ಸೂರ್ಯನ ಎಳೆ ಬಿಸಿಲಿನಿಂದ. ಇದರ ಹೊರತಾಗಿ ಸೂರ್ಯಕಾಂತಿ ಬೀಜಗಳು, ಮಕಾನ್ ನಂತಹ ಕೆಲವು ಆಹಾರ ವಸ್ತುಗಳಿಂದ ವಿಟಮಿನ್ ಡಿ ಅಂಶ ಹೆಚ್ಚಿಸಿಕೊಳ್ಳಬಹುದು.
ಅಲರ್ಜಿ, ಪಿಗ್ಮಂಟೇಷನ್ ಇತ್ಯಾದಿ ಸೂರ್ಯನ ಅಲರ್ಜಿಯಿಂದ ಬಳಲುತ್ತಿರುವವರ ಸಂಖ್ಯೆ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ. ಇದು ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಪ್ರಭಾವ ಬೀರುತ್ತಿದೆ ಎಂದು ತಜ್ಞರು ಹೇಳುತ್ತಾರೆ.
ಅಲ್ಲದೆ, ಬೆಂಗಳೂರಿಗರ ಜೀವನ ಶೈಲಿಯೇ ಬದಲಾಗುತ್ತಿದೆ. ಬೆಳಿಗ್ಗೆ ಮತ್ತು ಮುಸ್ಸಂಜೆ ವೇಳೆ ಸೂರ್ಯನ ಬಿಸಿಲಿಗೆ ಮೈ ಕಾಯಿಸುವಷ್ಟೂ ಪುರುಸೊತ್ತು ನಮ್ಮಲ್ಲಿಲ್ಲ. ಫಾಸ್ಟ್ ಫುಡ್ ಗಳ ಹಿಂದೆ ಬಿದ್ದಿರುವ ಮಂದಿ ಪೋಷಕಾಂಶಯುಕ್ತ ಆಹಾರವನ್ನು ಸೇವಿಸುವುದನ್ನೇ ಮರೆತಿದ್ದಾರೆ.