Select Your Language

Notifications

webdunia
webdunia
webdunia
webdunia

ಉದುರುವ ಕೂದಲು, ಬಕ್ಕತಲೆಗೆ 34 ಪರಿಹಾರ!

ಉದುರುವ ಕೂದಲು, ಬಕ್ಕತಲೆಗೆ 34 ಪರಿಹಾರ!
ಬೆಂಗಳೂರು , ಭಾನುವಾರ, 26 ನವೆಂಬರ್ 2017 (18:04 IST)
ಕೂದಲು ಉದುರುವುದು! ಬಹಳಷ್ಟು ಮಂದಿಗೆ ಇದೊಂದು ಗಂಭೀರ ಸಮಸ್ಯೆ. ಕೂದಲು ಉದುರುತ್ತಿರುವ ಬಗ್ಗೆ ತಲೆ ಬಿಸಿ ಮಾಡಿಯೇ ಇನ್ನಷ್ಟು ಕೂದಲು ಉದುರಿಸಿಕೊಳ್ಳಬೇಕಾದ ಅನಿವಾರ್ಯತೆ ಅವರದ್ದು. ವಂಶಪಾರಂಪರ್ಯದ ಬೋಳುತಲೆಯ ಶಾಪ ಕೆಲವರಿಗಾದರೆ, ಬಹಳಷ್ಟು ಮಂದಿಗೆ ಆಧುನಿಕ ಜೀವನ ಶೈಲಿ, ಬದಲಾದ ಆಹಾರ ಕ್ರಮದಿಂದಾಗಿಯೇ ಕೂದಲು ಉದುರುವ ಸಮಸ್ಯೆ ಶಾಪವಾಗಿ ಕಾಡುತ್ತದೆ ಎಂಬುದೂ ಸತ್ಯ. 
 
ಹೆಚ್ಚಿನ ಪ್ರಮಾಣದಲ್ಲಿ ಟೀ, ಕಾಫಿ, ಆಲ್ಕೋಹಾಲ್, ಮಾಂಸ ಸೇವನೆ, ಸಿಗರೇಟು ಸೇದುವುದು, ಹೆಚ್ಚು ಜಂಕ್ ಫುಡ್ ಆಹಾರ ವ್ಯವಸ್ಥೆಗೇ ಮಾರು ಹೋಗಿರುವುದು ಕೂಡಾ ಕೂದಲುದುರುವಿಕೆಗೆ ಕಾರಣ. ಇದಲ್ಲದೆ ಒತ್ತಡ ಕಡಿಮೆ ಮಾಡಲು ಅನಾವಶ್ಯಕವಾಗಿ ಮಾತ್ರೆ ಸೇವನೆ, ಬಿಪಿ, ಮಾನಸಿಕ ಟೆನ್ಶನ್, ಸುಸ್ತು ಮತ್ತಿತರ ಕಾಯಿಲೆಗಳಿಗಾಗಿ ಹೆಚ್ಚು ಮಾತ್ರೆ ಸೇವಿಸುವುದರಿಂದಲೂ ಕೂದಲು ಉದುರಬಹುದು. 
 
ಹಾಗಾದರೆ ಕೂದಲನ್ನು ಹೇಗೆ ಸಂರಕ್ಷಿಸಬಹುದು ಅಥವಾ ಬಕ್ಕ (ಬೋಳು)ತಲೆಯಲ್ಲಿ ಮತ್ತೆ ಕೂದಲು ಚಿಗುರಿಸುವುದು ಹೇಗೆ ಎಂಬ ನಿಮ್ಮಲ್ಲೇ ಎದ್ದ ಪ್ರಶ್ನೆಗೆ ಮನೆಯಲ್ಲೇ ಸುಲಭವಾಗಿ ಮಾಡಿಕೊಳ್ಳಬಹುದಾದ ಕೆಲವು ಪರಿಹಾರ ಉಪಾಯಗಳು ಇಲ್ಲಿವೆ. ಸ್ವೀಕರಿಸುವುದು ನಿಮಗೆ ಬಿಟ್ಟಿದ್ದು.
 
1. ಯಾವಾಗಲೂ ತಲೆಕೂದಲನ್ನು ಸ್ವಚ್ಛವಾಗಿಡಿ. ಕೂದಲು ಸ್ವಚ್ಛವಾಗಿಟ್ಟರೆ ತಲೆಹೊಟ್ಟು, ತುರಿಕೆ ಕಡಿಮೆಯಾಗಿ ಕೂದಲುದುರುವುದೂ ಕೂಡಾ ಕಡಿಮೆಯಾಗುತ್ತದೆ.
 
2. ತಿಂಗಳಿಗೆ ಕನಿಷ್ಟ ಎರಡು ಬಾರಿಯಾದರೂ ಎಣ್ಣೆಯನ್ನು ಬಿಸಿ ಮಾಡಿ ತಲೆಬುಡಕ್ಕೆ ಹಚ್ಚಿ ಮಸಾಜ್ ಮಾಡಿ. ಇದಕ್ಕೆ ಆಲಿವ್ ಎಣ್ಣೆ, ತೆಂಗಿನೆಣ್ಣೆ ಅಥವಾ ಬಾದಾಮಿ ಎಣ್ಣೆ ಬಳಸಬಹುದು.
3. ತಲೆಯಲ್ಲಿ ಹೊಟ್ಟು ಏಳುತ್ತಿದ್ದರೆ ಮಸಾಜ್ ಮಾಡುವ ಎಣ್ಣೆಗೆ ಸ್ವಲ್ಪ ಕರ್ಪೂರದ ಚೂರುಗಳನ್ನು ಹಾಕಿ. ಇದು ಹೊಟ್ಟನ್ನು ಕಡಿಮೆ ಮಾಡುತ್ತದೆ.
 
4. ತಲೆಗೆ ಸ್ನಾನ ಮಾಡಿದ ನಂತರ ಒದ್ದೆ ಕೂದಲನ್ನು ಬಾಚಬೇಡಿ. ಆಗ ಕೂದಲು ಉದುರುವುದು ಹೆಚ್ಚು. ಕೂದಲು ಒಣಗಿಸಲು ಹೇರ್ ಡ್ರೈಯರ್ ಬಳಸಬೇಡಿ. ಇದರಿಂದ ಕೂದಲು ಉದುರುವುದು ಹೆಚ್ಚುತ್ತದೆ. ಸ್ನಾನ ಮಾಡಿದ ಮೇಲೆ ಸ್ವಚ್ಛ ಬಟ್ಟೆಯಲ್ಲಿ ತಲೆಕೂದಲನ್ನು ಕಟ್ಟಿ ಸ್ವಲ್ಪ ಹೊತ್ತಿನ ಮೇಲೆ ಅದನ್ನು ಬಿಚ್ಚಿ, ಸಹಜವಾಗಿಯೇ ಅದು ಒಣಗಲಿ.
5. ನೆಲ್ಲಿಕಾಯಿ, ಸೀಗೆಕಾಯಿ ಹಾಗೂ ಒಣಗಿದ ಕಹಿಬೇವಿನ ಎಲೆಯನ್ನು ಚೆನ್ನಾಗಿ ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ. ಒಂದು ಗಂಟೆ ಬಿಟ್ಟು ತಲೆ ತೊಳೆಯಿರಿ.
 
6. ಕಹಿಬೇವು, ಮೆಹೆಂದಿ ಸೊಪ್ಪನ್ನು ಸಾಸಿವ ಎಣ್ಣೆಯಲ್ಲಿ ಕುದಿಸಿ ತಣಿಸಿ. ನಂತರ ಇದನ್ನು ಸೋಸಿ ಬಾಟಲಿಯಲ್ಲಿ ಹಾಕಿಡಿ. ಅದಕ್ಕೆ ಕೆಲವು ಚೂರು ಕರ್ಪೂರವನ್ನೂ ಹಾಕಿಡಿ. ಈ ಎಣ್ಣೆಯನ್ನು ಪ್ರತಿನಿತ್ಯ ತಲೆಗೆ ಬಳಸಬಹುದು. ಮಸಾಜ್‌ಗಾಗಿಯೂ ಬಳಸಬಹುದು.
7. ಬಾದಾಮಿ ಎಣ್ಣೆ, ಆಲಿವ್ ಎಣ್ಣೆ ಹಾಗೂ ಹರಳೆಣ್ಣೆಯನ್ನು ಸಮಪ್ರಮಾಣದಲ್ಲಿ ಮಿಕ್ಸ್ ಮಾಡಿ ಪ್ರತಿನಿತ್ಯ ಬಳಸಬಹುದು.
8. ತಿಂಗಳಿಗೊಮ್ಮೆಯಾದರೂ ಹೇರ್ ಪ್ಯಾಕ್ ಹಚ್ಚಿ. ಮೆಹೆಂದಿ ಸೊಪ್ಪು, ಮೊಸರು ಅಥವಾ ಮೊಟ್ಟೆ ಯಾವುದನ್ನೂ ಹೇರ್ ಪ್ಯಾಕ್ ಆಗಿ ಬಳಸಬಹುದು.
9. ಕೂದಲನ್ನು ಸ್ಟೈಲಿಶ್ ಆಗಿ ಕಾಣಿಸಲಿಕ್ಕಾಗಿ ಹೇರ್ ಜೆಲ್, ಕ್ರೀಂ, ಸ್ಪ್ರೇ ಅಥವಾ ಲೋಷನ್‌ಗಳನ್ನು ಬಳಸಬೇಡಿ. ಇಂಥ ರಾಸಾಯನಿಕಗಳು ಕೂದಲಿಗೆ ಹಾನಿಕಾರಕ.
 
10. ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಗೆ ಸ್ವಲ್ಪ ಮೆಂತ್ಯವನ್ನು ಹಾಕಿ ಕುದಿಸಿ. ನಂತರ ಸೋಸಿ ಬಾಟಲಿಯಲ್ಲಿ ಹಾಕಿಟ್ಟು ಪ್ರತಿನಿತ್ಯ ಬಳಸಿ.
 
11. ಯಾವಾಗಲೂ ನೈಸರ್ಗಿಕ ಶಾಂಪೂವನ್ನೇ ತಲೆ ತೊಳೆಯಲು ಬಳಸಿ. ಆದರೂ ಬಹಳಷ್ಟು ಶಾಂಪೂಗಳು ರಾಸಾಯನಿಕವನ್ನೇ ಹೊಂದಿರುತ್ತದೆ. ಇದು ನಿಮ್ಮ ಕೂದಲ ಮೇಲೆ ಕೆಟ್ಟ ಪರಿಣಾಮ ಬೀರಲೂ ಬಹುದು. ರಾಸಾಯನಿಕಗಳು ತಲೆಯ ಉಷ್ಣವನ್ನು ಹೆಚ್ಚಿಸುತ್ತದೆ. ಇದರ ಪರಿಣಾಮವೇ ಪಿತ್ತ. ಹಾಗಾಗಿ ಸೀಗೆಕಾಯಿ, ನೆಲ್ಲಿಕಾಯಿ ಪುಡಿಯನ್ನು ತಲೆ ತೊಳೆಯಲು ಬಳಸುವುದು ಉತ್ತಮ.
12. ತಲೆಗೆ ಎಣ್ಣೆ ಹಚ್ಚುವುದು ತುಂಬ ಅಗತ್ಯ. ಕೂದಲು ಉದುರುವುದಕ್ಕೆ ತಲೆಗೆ ಎಣ್ಣೆ ಹಚ್ಚದಿರುವುದೂ ಪ್ರಮುಖ ಕಾರಣ. ವಾರದಲ್ಲಿ ಕನಿಷ್ಟ ಮೂರು ಬಾರಿಯಾದರೂ ತಲೆಕೂದಲ ಬುಡಕ್ಕೆ ತೆಂಗಿನೆಣ್ಣೆ ಅಥವಾ ಸಾಸಿವೆ ಎಣ್ಣೆಯನ್ನು ಹಚ್ಚಿ ಚೆನ್ನಾಗಿ ಬೆರಳುಗಳ ತುದಿಯಿಂದ ಮಸಾಜ್ ಮಾಡಿ. ಇದಲ್ಲದೆ ಕೆಲವು ಆಯುರ್ವೇದದ ಎಣ್ಣೆಗಳಾದ ಮಹಾಭೃಂಗರಾಜ ತೈಲ, ಆಮ್ಲಾ ಆಯಿಲ್ ಅಥವಾ ಅರ್ನಿಕಾ ಆಯಿಲ್‌ಗಳನ್ನೂ ಬಳಸಿದರೆ ಉತ್ತಮ. ಎಣ್ಣೆ ತಲೆಕೂದಲ ಬೇರುಗಳಿಗೆ ಇಳಿಯುವಂತೆ ಬುಡಕ್ಕೆ ಹಚ್ಚಬೇಕು.
 
13. ಮಲಬದ್ಧತೆ ಅಥವಾ ಅಜೀರ್ಣ ಆಗದಂತೆ ಯಾವಾಗಲೂ ನೋಡಿಕೊಳ್ಳಬೇಕು. ಮಲಬದ್ಧತೆ ಇದ್ದರೆ ಸುಮ್ಮನೆ ಕೂರದೆ ಯಾವುದಾದರೂ ಮೆದು ಮನೆ ಔಷಧಿಯ ಮೂಲಕ ಸರಿಪಡಿಸಿಕೊಳ್ಳಿ. ಇದಕ್ಕೆ ಆಯುರ್ವೇದದ ತ್ರಿಫಲಾ ಪುಡಿ ಕೂಡಾ ಬಳಸಬಹುದು.
 
14. ಆಹಾರದಲ್ಲಿ ಹಸಿರು ಸೊಪ್ಪು, ತರಕಾರಿ ಹೇರಳವಾಗಿರಲಿ. ಸಲಾಡ್, ಹಾಲು, ಹಣ್ಣು, ಮೊಳಕೆ ಕಾಳುಗಳನ್ನು ಹೆಚ್ಚಾಗಿ ಸೇವಿಸಿ. ಹೆಚ್ಚು ಪ್ರೋಟೀನ್, ವಿಟಮಿನ್ ಎ ಇರುವ ಆಹಾರಗಳನ್ನು ತಿನ್ನಿ.
 
15. ಭೃಂಗರಾಜ ಎಲೆ, ನೆಲ್ಲಿಕಾಯಿ, ಕಪ್ಪು ಎಳ್ಳು ಮತ್ತಿತರ ವಸ್ತುಗಳನ್ನು ಸೇರಿಸಿ ಮನೆಯಲ್ಲೇ ಎಣ್ಣೆ ಮಾಡಿ ನಿತ್ಯ ತಲೆಗೆ ಹಚ್ಚುವುದರಿಂದಲೂ ಕೂದಲು ಉದುರುವುದನ್ನು ಕಡಿಮೆ ಮಾಡಿಕೊಳ್ಳಬಹುದು.
 
16. ತಲೆಗೆ ಸ್ನಾನ ಮಾಡಿದ ಮೇಲೆ ತಲೆ ಬುಡವನ್ನು ಚೆನ್ನಾಗಿ ಮಸಾಜ್ ಮಾಡುವಂತೆ ಉಜ್ಜಿ. ಇದು ನಿಮ್ಮ ತಲೆಬುಡದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ ಹಾಗೂ ಕೂದಲನ್ನು ದೃಢವಾಗಿಸುತ್ತದೆ.
 
17. ಬಸಳೆ ಸೊಪ್ಪಿನ ಹಸಿಯಾದ ಜ್ಯೂಸ್ ಮಾಡಿ ಕುಡಿಯಿರಿ. ಇದು ಕೂದಲ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಕ್ಯಾರೆಟ್ ಜ್ಯೂಸ್ ಕೂಡಾ ಉತ್ತಮ.
 
18. ಪ್ರತಿದಿನವೂ ತೆಂಗಿನೆಣ್ಣೆ ಹಾಗೂ ನಿಂಬೆಹಣ್ಣಿನ ರಸವನ್ನು ಮಿಕ್ಸ್ ಮಾಡಿ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿದರೆ ಉತ್ತಮ ಫಲ ಕಾಣುತ್ತದೆ.
 
19. ಕೊತ್ತಂಬರಿ ಸೊಪ್ಪಿನ ಪೇಸ್ಟ್ ಮಾಡಿ ತಲೆಗೆ ಹಚ್ಚಿದರೆ ಕೂದಲು ಉದುರುವ ಸಮಸ್ಯೆಗೆ ಉತ್ತಮ ಫಲ ಕಾಣುತ್ತದೆ. ಬೋಳಾದ ತಲೆಗೂ ಇದು ಉತ್ತಮ.
 
20. ಬೇಯಿಸಿದ ಉದ್ದಿನ ಬೇಳೆಯ ಪೇಸ್ಟ್ ತಲೆಗೆ ಹಚ್ಚಿ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡಿದರೆ ಕೂದಲಿಗೆ ಒಳ್ಳೆಯದು.
 
21. ಮೆಂತೆ ಸೊಪ್ಪನ್ನು ಅರೆದು ಪೇಸ್ಟ್ ಮಾಡಿ ತಲೆಗೆ ಹಚ್ಚಿ ಸ್ವಲ್ಪ ಹೊತ್ತಿನ ಬಳಿಕ ಸ್ನಾನ ಮಾಡುವುದರಿಂದ ಕೂದಲು ಉದುರುವುದು ನಿಧಾನವಾಗಿ ಕಡಿಮೆಯಾಗುತ್ತದೆ. ಮೆಂತೆ ಸೊಪ್ಪಿನ ಬದಲಾಗಿ ಮೆಂತ್ಯವನ್ನೂ ಬಳಸಬಹುದು.
 
22. ಯಷ್ಟಿಮಧುವನ್ನು ಹಾಲಿನಲ್ಲಿ ಅರೆದು ಬೋಳಾದ ಭಾಗಕ್ಕೆ ಹಚ್ಚಿದರೆ ಅಲ್ಲಿ ಕೂದಲು ಹುಟ್ಟಲು ಆರಂಭವಾಗುತ್ತದೆ.
23. ನಿಂಬೆಹಣ್ಣಿನ ಬೀಜ ಹಾಗೂ ಕರಿಮೆಣಸನ್ನು ಚೆನ್ನಾಗಿ ಅರೆದು ಬೋಳಾದ ಜಾಗಕ್ಕೆ ಹಚ್ಚಿದರೆ ಹೊಸ ಕೂದಲು ಹುಟ್ಟಿ ಬೆಳೆಯಲು ಆರಂಭವಾಗುತ್ತದೆ.
 
24. ನೆಲ್ಲಿಕಾಯಿಯನ್ನು ತಿನ್ನುವುದರಿಂದಲೂ ಕೂದಲು ಉದುರುವುದನ್ನು ಕಡಿಮೆ ಮಾಡಬಹುದು.
 
25. ಒಂದು ಕಪ್ ಸಾಸಿವೆ ಎಣ್ಣೆಯನ್ನು ನಾಲ್ಕು ಚಮಚ ಮೆಹೆಂದಿ ಸೊಪ್ಪಿನ ಜತೆಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ಅದನ್ನು ಸೋಸಿ ಒಂದು ಬಾಟಲಿಯಲ್ಲಿ ಹಾಕಿಟ್ಟು ದಿನವೂ ಬೋಳಾದ ತಲೆಯ ಭಾಗಕ್ಕೆ ಲೇಪಿಸಿ. ಇದು ಕೂದಲು ಮತ್ತೆ ಹುಟ್ಟಲು ಸಹಾಯ ಮಾಡುತ್ತದೆ.
 
26. ಜೇನಿನೊಂದಿಗೆ ಮೊಟ್ಟೆಯ ಹಳದಿ ಭಾಗವನ್ನು ಕಲಸಿ ಚೆನ್ನಾಗಿ ತಲೆಬುಡಕ್ಕೆ ಮಸಾಜ್ ಮಾಡಿ. ಅರ್ಧ ಗಂಟೆ ಬಿಟ್ಟು ತಲೆ ತೊಳೆಯಿರಿ.
 
27. ಪ್ರತಿ ದಿನವೂ ಮೆಹೆಂದಿ ಎಲೆಯನ್ನು ಎರೆದು ತಲೆಗೆ ಹಚ್ಚುತ್ತಾ ಬಂದಂಲ್ಲಿ ಕೂದಲು ಉದುರುವುದು ನಿಲ್ಲುತ್ತದೆ. ಹಾಗೂ ಹೊಸ ಕೂದಲು ಮೊಳೆಯಲು ಶುರುವಾಗುತ್ತದೆ.
 
28. ರಾತ್ರಿ ಮಲಗುವ ಮೊದಲು ಹರಳೆಣ್ಣೆಯನ್ನು ತಲೆಯ ಬುಡಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ. ಕೂದಲಿಗೆ ಹಚ್ಚಬೇಡಿ. ನಂತರ ತಲೆಯನ್ನು ಬಟ್ಟೆಯಲ್ಲಿ ಸುತ್ತಿ ಮಲಗಿ ಬೆಳಗ್ಗೆ ಎದ್ದು ತಲೆಗೆ ಸ್ನಾನ ಮಾಡಿ. ಕನಿಷ್ಟ 15 ದಿನವಾದರೂ ಹೀಗೆ ಮಾಡಿ.
29. ಒಂದು ಚಮಚ ಸಾಸಿವೆಯನ್ನು ಒಂದು ಕಪ್ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ. ನಂತರ ತಣಿದ ಮೇಲೆ ಇದನ್ನು ಸೋಸಿ, ಕೇವಲ ನೀರನ್ನು ಮಾತ್ರ ಕುಡಿಯಿರಿ.
 
30. ಎರಡು ಚಮಚಗಳಷ್ಟು ಆಲಿವ್ ಎಣ್ಣೆ, ರೋಸ್‌ಮೆರಿ, ಒಂದು ನಿಂಬೆಹಣ್ಣಿನ ರಸ, ಹಾಗೂ ಒಂದು ಮೊಟ್ಟೆಯ ಹಳದಿ ಲೋಳೆ ಚೆನ್ನಾಗಿ ಮಿಕ್ಸ್ ಮಾಡಿ. ನಂತರ ತಲೆಗೆ ಹಚ್ಚಿ ಒಂದು ಗಂಟೆ ಬಿಟ್ಟು ತೊಳೆಯಿರಿ. ಇದು ತಲೆಕೂದಲಿಗೆ ಉತ್ತಮ ಟಾನಿಕ್.
 
31. ಅರ್ಧ ಕಪ್ ಆಲಿವ್ ಎಣ್ಣೆಗೆ ಒಂದು ಚಮಚ ಜೀರಿಗೆ ಪುಡಿಯನ್ನು ಮಿಕ್ಸ್ ಮಾಡಿ ಚೆನ್ನಾಗಿ ತಲೆಗೆ ಹಚ್ಚಿ ಮಸಾಜ್ ಮಾಡಿ. ಒಂದು ಗಂಟೆ ಬಿಟ್ಟು ತಲೆಗೆ ಸ್ನಾನ ಮಾಡಿ.
 
32. ಅರ್ಧ ಕಪ್ ತೆಂಗಿನ ಎಣ್ಣೆಗೆ ಸ್ವಲ್ಪ ಒಣಗಿದ ನೆಲ್ಲಿಕಾಯಿ ತುಂಡುಗಳನ್ನು ಹಾಕಿ ಚೆನ್ನಾಗಿ ಕುದಿಸಿ. ತಣ್ಣಗಾದ ಮೇಲೆ ತಲೆಯ ಬುಡಕ್ಕೆ ಹಚ್ಚಿ. ಇದು ಕೂದಲುದುರುವುದನ್ನು ತಡೆಯಲು ಸೂಕ್ತ.
 
33. ತೆಂಗಿನ ಕಾಯಿಯನ್ನು ತುರಿದು ಅದರ ಹಾಲನ್ನು ತೆಗೆದು ತಲೆಗೆ ಹಚ್ಚಿ ಮಸಾಜ್ ಮಾಡಿ ನಂತರ ಒಂದು ಗಂಟೆ ಬಿಟ್ಟು ಸ್ನಾನ ಮಾಡಿದರೆ ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ.
 
34. ತೆಂಗಿನ ಕಾಯಿಯ ನೀರನ್ನು ಕುಡಿಯುವುದರಿಂದಲೂ ತಲೆಕೂದಲು ಉದುರುವುದನ್ನು ಕಡಿಮೆ ಮಾಡಬಹುದು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಗರ್ಭಿಣಿಯರು ಲೈಂಗಿಕಾಸಕ್ತಿ ಕಳೆದುಕೊಳ್ಳುವುದು ಏಕೆ?