ಚಳಿಗಾಲ ಬಂತೆಂದರೆ ಸ್ವೆಟರ್, ಸಾಕ್ಸ್ ಹಾಕಿಕೊಂಡು ಬೆಚ್ಚಗೆ ಮನೆಯೊಳಗಿರಲು ಬಯಸುತ್ತೀರಿ. ಚಳಿಗಾಲದಲ್ಲಿ ನೀವು ಗಮನಿಸಿರಬಹುದು, ವಿಶೇಷವಾಗಿ ನಿಮ್ಮ ಮೂಗಿನ ತುದಿ ಹೆಚ್ಚು ತಣ್ಣಗಿರುತ್ತದೆ. ಇದು ಯಾಕೆ ಹೀಗೆ ಗೊತ್ತಾ?
ಚಳಿಗಾಲದಲ್ಲಿ ದೇಹದ ಎಲ್ಲಾ ಭಾಗಗಳೂ ತಂಪಾಗಿ ಚಳಿಯಾಗುತ್ತಿರುತ್ತದೆ. ಆದರೆ ವಿಶೇಷವಾಗಿ ಮೂಗಿನ ತುದಿ ತಣ್ಣಗಿರುತ್ತದೆ. ಹಿರಿಯರು ಹಿಂದೆಲ್ಲಾ ಮೂಗಿನ ತುದಿ ತಂಪಾಗಿದ್ದರೆ ಒಳ್ಳೆ ಚಳಿ ಎನ್ನುತ್ತಿದ್ದ ಕಾಲವಿತ್ತು. ಅಷ್ಟಕ್ಕೂ ಮೂಗಿನ ತುದಿ ತಣ್ಣಗಾಗುವುದಕ್ಕೂ ಕಾರಣವಿದೆ.
ಚಳಿಗಾಲದಲ್ಲಿ ಶೈತ್ಯ ಗಾಳಿಯಿಂದಾಗಿ ರಕ್ತನಾಳಗಳು ಸಂಕುಚಿತಗೊಂಡು ರಕ್ತ ಪರಿಚಲನೆಯೂ ನಿಧಾನವಾಗುತ್ತದೆ. ಮೂಗಿನ ತುದಿ ಭಾಗಕ್ಕೆ ರಕ್ತದ ಪರಿಚಲನೆ ಕಡಿಮೆಯಾಗಿರುತ್ತದೆ. ರಕ್ತ ಸಂಚಾರ ಕಡಿಮೆಯಾಗಿರುವುದರಿಂದ ಈ ಭಾಗ ತಣ್ಣಗಿರುತ್ತದೆ.
ಮೂಗಿನ ತುದಿ ಮಾತ್ರವಲ್ಲ, ಪಾದಗಳು, ಅಂಗೈ ಕೂಡಾ ತಣ್ಣಗಾಗುವುದಕ್ಕೂ ಇದೇ ಕಾರಣವಾಗಿದೆ. ರಕ್ತದ ಪೂರೈಕೆ ಕಡಿಮೆಯಾದಾಗ ಈ ಭಾಗ ತಣ್ಣಗಾಗುತ್ತದೆ. ಈ ಸಮಯದಲ್ಲಿ ದೇಹದ ಮುಖ್ಯ ಭಾಗಗಳಿಗೆ ಬೆಚ್ಚಗಿನ ರಕ್ತ ಪೂರೈಕೆ ಮಾಡುವುದರಿಂದ ದೇಹದ ಉಷ್ಣತೆ ಸಮತೋಲನದಲ್ಲಿರುತ್ತದೆ.