ಬೆಂಗಳೂರು: ಇಂದು ಪ್ರೇಮಿಗಳ ದಿನ. ಸಂಗಾತಿಯೊಂದಿಗೆ ಖುಷಿಯಿಂದ ಸಂಭ್ರಮಿಸುವ ದಿನ. ಪ್ರತಿಯೊಬ್ಬ ಪ್ರೇಮಿಯೂ ತನ್ನ ಸಂಗಾತಿಯಿಂದ ಬಯಸುವುದು ಇದೊಂದನ್ನೇ. ಅದೇನು ಇಲ್ಲಿ ನೋಡಿ.
ಪ್ರೀತಿ ಎಂಬುದಕ್ಕೆ ಎಲ್ಲರಿಗೂ ಅವರದ್ದೇ ಆದ ಅರ್ಥಗಳಿರುತ್ತವೆ. ಕೆಲವರಿಗೆ ಪ್ರೀತಿ ಎನ್ನುವುದು ಅಮಲು, ಇನ್ನು ಕೆಲವರಿಗೆ ನಂಬಿಕೆ ಮತ್ತು ಕೆಲವರಿಗೆ ಸಂತೋಷ. ಏನೇ ಅರ್ಥವಿದ್ದರೂ ತನ್ನ ಜೊತೆಗೇ ಜೀವನ ಪೂರ್ತಿ ತನ್ನ ಸಂಗಾತಿ ಕೈಹಿಡಿದು ನಡೆದುಕೊಂಡು ಬರಬೇಕೆಂಬುದು ಪ್ರತಿಯೊಬ್ಬ ಪ್ರೇಮಿಯೂ ಬಯಸುತ್ತಾರೆ.
ಪುರುಷ ಮತ್ತು ಮಹಿಳೆಯರಿಗೆ ಪ್ರೀತಿಯಲ್ಲಿ ಬೇರೆ ಬೇರೆ ನಿರೀಕ್ಷೆಗಳಿರಬಹುದು. ಒಬ್ಬ ಮಹಿಳೆ ತನ್ನ ಸಂಗಾತಿಯಲ್ಲಿ ತಂದೆಯಂತೆ ರಕ್ಷಕ, ತಾಯಿಯಂತೆ ಕೇರ್ ಮಾಡುವ ಸ್ವಭಾವವನ್ನು ಬಯಸುತ್ತಾರೆ. ಅದೇ ಪುರುಷರಿಗೆ ತನ್ನ ಸಂಗಾತಿ ತಾನು ಹೇಗಿದ್ದೇನೋ ಹಾಗೇ ಸ್ವೀಕರಿಸಲಿ ಎನ್ನುವ ನಿರೀಕ್ಷೆಯಿರುತ್ತದೆ.
ಒಂದು ಪ್ರೇಮ ಸಂಬಂಧ ಗಟ್ಟಿಯಾಗಬೇಕಾದರೆ ಅಲ್ಲಿ ಪ್ರೀತಿಯೊಂದೇ ಇದ್ದರೆ ಸಾಲದು, ನಂಬಿಕೆ ಮತ್ತು ಇರುವಂತೆಯೇ ಸ್ವೀಕರಿಸುವ ಮನೋಭಾವವಿರಬೇಕು. ಎಲ್ಲಕ್ಕಿಂತ ಹೆಚ್ಚು ತಾಳ್ಮೆಯಿರಬೇಕು. ಪ್ರೇಮ ಸಂಬಂಧದಲ್ಲಿ ಅಪನಂಬಿಕೆ, ಸಂಶಯಗಳಿಗೆ ಇನಿತೂ ಜಾಗವಿರಬಾರದು. ಇಂದು ಪ್ರೇಮಿಯ ಜೊತೆ ಸಂಭ್ರಮಿಸುತ್ತಿರುವ, ಮನಸ್ಸಿನಲ್ಲೇ ತನ್ನ ಸಂಗಾತಿಯನ್ನು ಕಲ್ಪಿಸಿಕೊಂಡು ಖುಷಿಪಡುತ್ತಿರುವ ಎಲ್ಲರಿಗೂ ಪ್ರೇಮಿಗಳ ದಿನದ ಶುಭಾಶಯಗಳು.