ಬೆಂಗಳೂರು: ಇತ್ತೀಚೆಗಿನ ಚಿನ್ನದ ಬೆಲೆ ಕೇಳಿದರೆ ಪೋಷಕರು ಕಂಗಾಲಾಗುತ್ತಿದ್ದಾರೆ. ಹೀಗಾಗಿ ತಮ್ಮ ಮಕ್ಕಳಿಗೆ ಮದುವೆ ಮಾಡಿಕೊಡುವಾಗ ಚಿನ್ನ ಬೇಡ, ಅದೇ ದುಡ್ಡಿನಲ್ಲಿ ಸೈಟು ಕೊಡಿಸೋಣ ಎನ್ನುತ್ತಿದ್ದಾರೆ.
ಚಿನ್ನದ ರೇಟು ಸಾರ್ವಕಾಲಿಕ ಏರಿಕೆ ಕಾಣುತ್ತಿದೆ. ನಿನ್ನೆ ಪರಿಶುದ್ಧ ಚಿನ್ನದ ಬೆಲೆ ಬರೋಬ್ಬರಿ 1,79,705 ರೂ. ತಲುಪಿತ್ತು. ಇಷ್ಟು ಏರಿಕೆ ಸದ್ಯಕ್ಕೆಂದೂ ಆಗಿರಲಿಲ್ಲ. ಬೆಳ್ಳಿ ಬೆಲೆಯೂ ಕಡಿಮೆಯೇನಲ್ಲ. ಈಗ ಬೆಳ್ಳಿ ಬೆಲೆ ಪ್ರತೀ ಕೆ.ಜಿ.ಗೆ 4,10,000 ರೂ. ತಲುಪಿದೆ. ಇದು ದಾಖಲೆಯ ಬೆಲೆಯಾಗಿದೆ.
ಇದರಿಂದಾಗಿ ಈಗ ಹೆಣ್ಣು ಹೆತ್ತವರು ಕಂಗಾಲಾಗಿದ್ದಾರೆ. ಮಗಳಿಗೆ ಮದುವೆಯಿದೆ. ಚಿನ್ನ ಕೊಡಬೇಕು ಎಂದರೆ ಕೈಯಲ್ಲಿದ್ದ ಹಣ ಎಲ್ಲಾ ಹಾಕಿದರೂ ಸಾಲಲ್ಲ. ಹೀಗಿದ್ದ ಮೇಲೆ ಮದುವೆ ಮಾಡೋದು ಹೇಗೆ ಎನ್ನುತ್ತಿದ್ದಾರೆ. ಕೆಲವು ಪೋಷಕರು ಚಿನ್ನಕ್ಕಿಂತ ಸೈಟು ಖರೀದಿಸೋದು ವಾಸಿ ಎಂಬ ಹಂತಕ್ಕೆ ತಲುಪಿದ್ದಾರೆ.
ಇನ್ನು ಕೆಲವರು ಚಿನ್ನವನ್ನು ಕಂತು ಕಂತುಗಳಲ್ಲಿ ಖರೀದಿಸುವ ಯೋಜನೆಗಳ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಮಕ್ಕಳಿಗೆ ಮದುವೆ ಮಾಡಿಸಬೇಕು ಎಂದರೆ ಎರಡು-ಮೂರು ವರ್ಷಗಳ ಹಿಂದೆಯೇ ಚಿನ್ನ ಖರೀದಿಗೆ ಯೋಜನೆ ಹಾಕಿಕೊಳ್ಳಬೇಕು ಎನ್ನುವ ಹಂತಕ್ಕೆ ತಲುಪಿದ್ದೇವೆ. ಸದ್ಯಕ್ಕಂತೂ ಚಿನ್ನದ ಬೆಲೆ ಇಳಿಕೆಯಾಗುವ ಲಕ್ಷಣವೇ ಇಲ್ಲ. ಹೀಗಾಗಿ ಬಡವರು ಈಗ ನೋ ಗೋಲ್ಡ್ ಮದುವೆಯನ್ನೇ ಟ್ರೆಂಡ್ ಮಾಡಿಕೊಳ್ಳೋದು ಉತ್ತಮ ಎನ್ನುವ ಹಂತಕ್ಕೆ ಬಂದಿದ್ದಾರೆ.